

ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರದಲ್ಲಿ ನಡೆಯುತ್ತಿರುವ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಮತ್ತು ನಟ ವಿಕಿ ಕೌಶಲ್ರ ಮದುವೆಗೆ ದೇಶವಿದೇಶಗಳಿಂದ ಬಂಧುಮಿತ್ರರು ಆಗಮಿಸಿದ್ದಾರೆ. ಹಲವು ಆಟಗಳು, ಸಂಗೀತ್, ಮೆಹೆಂದಿ, ಹಲದೀ ಸಮಾರಂಭಗಳ ನಡುವೆ ಈ ಹಾಟ್ ಕಪಲ್ನ ಜೀವನದ ಅತ್ಯಂತ ಮಹತ್ವದ ಕ್ಷಣಗಳು ಕಳೆಯುತ್ತಿವೆ. ಹೀಗಿರುವಾಗ, ನೆರೆದಿರುವ ಅತಿಥಿಗಳಿಗೆ ಈ ಜೋಡಿ, 'ನಿಮ್ಮ ಫೋನನ್ನು ರೂಮಿನಲ್ಲೇ ಬಿಟ್ಟುಬನ್ನಿ. ವಿವಾಹ ಸಮಾರಂಭದ ಯಾವುದೇ ಶಾಸ್ತ್ರಗಳ ಚಿತ್ರಗಳನ್ನೂ ಶೇರ್ ಮಾಡಬೇಡಿ' ಎಂದು ವಿಶೇಷ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ.
ಮದುವೆಯನ್ನು ಆಯೋಜಿಸುತ್ತಿರುವ ಶಾದಿ ಸ್ಕ್ವಾಡ್, ಮದುವೆಗೆ ಆಗಮಿಸಿದ ಅತಿಥಿಗಳಿಗೆ ನೀಡಿದ ವೆಲ್ಕಮ್ ಹ್ಯಾಂಪರ್ನಲ್ಲಿ ತಿಂಡಿತಿನಿಸುಗಳೊಂದಿಗೆ, ಮದುವೆ ಮಂಟಪಕ್ಕೆ 'ನೋ ಮೊಬೈಲ್ ಫೋನ್ಸ್ ಪ್ಲೀಸ್' ಎಂಬ ಮನವಿ ಮಾಡಿದೆ. "ನಿಮ್ಮ ಮೊಬೈಲ್ ಫೋನ್ಗಳನ್ನು ನಿಂನಿಮ್ಮ ರೂಮುಗಳಲ್ಲೇ ಬಿಟ್ಟುಬನ್ನಿ. ಮದುವೆ ಸಮಾರಂಭಗಳ, ಶಾಸ್ತ್ರಗಳ ಯಾವುದೇ ಫೋಟೋ-ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ" ಎಂದು ಕೇಳಿಕೊಂಡಿರುವ ಕಾರ್ಡ್ ಒಂದರ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.
ವಿಕಿ-ಕತ್ರೀನಾ ಇಷ್ಟು ಗೌಪ್ಯತೆ ಕಾಪಾಡುತ್ತಿರುವುದಕ್ಕೆ ಭಾರೀ ಕಾರಣವೇ ಇದೆ. ಈ ಸ್ಟಾರ್ ಜೋಡಿಯ ಅದ್ಧೂರಿ ಮದುವೆಯ ಸುಮಧುರ ಕ್ಷಣಗಳ ಟೆಲಿಕಾಸ್ಟಿಂಗ್ ಹಕ್ಕುಗಳನ್ನು ಒಟಿಟಿ ವೇದಿಕೆಗಳು ಪಡೆಯಲು ಹಣಾಹಣಿ ನಡೆಸಿರುವುದೂ ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಮಂಗಳವಾರದಂದು ನೆಟ್ಫ್ಲಿಕ್ಸ್ ಇದಕ್ಕಾಗಿ 100 ಕೋಟಿ ರೂ.ಗಳ ಆಫರ್ ನೀಡಿರುವುದು ವರದಿಯಾಗಿತ್ತು. ಇದೀಗ ಅಮೆಜಾನ್ ಪ್ರೈಮ್ಗೆ 80 ಕೋಟಿ ರೂ.ಗಳಿಗೆ ಟೆಲಿಕಾಸ್ಟ್ ಹಕ್ಕುಗಳನ್ನು ವಿಕಿ-ಕತ್ರೀನಾ ಮಾರಿಬಿಟ್ಟಿದ್ದಾರೆ; 2022 ರ ಆರಂಭದಲ್ಲಿ ಅದನ್ನು ಒಟಿಟಿ ನೋಡುಗರು ಕಣ್ತುಂಬಿಸಿಕೊಳ್ಳಲಿಕ್ಕೆ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. (ಏಜೆನ್ಸೀಸ್)