ZOOM​ ಕಾಲಲ್ಲೇ 900 ಜನರನ್ನ ಕೆಲಸದಿಂದ ತೆಗೆದ CEO! ವಿಡಿಯೋ ವೈರಲ್​​

1198740
Published on

ನವದೆಹಲಿ/ನ್ಯೂಯಾರ್ಕ್​: ಕರೊನಾ ಯುಗದಲ್ಲಿ ಎಲ್ಲವೂ ಜೂಮ್​ ಕಾಲ್​ನಲ್ಲೇ ನಡೆಯುತ್ತಿದೆ. ಇದೀಗ ಕಂಪೆನಿಯೊಂದರ ಸಿಇಒ ಜೂಮ್​​ ಕಾಲ್​ನಲ್ಲೇ ತಮ್ಮ 900 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ವರ್ಷಾಂತ್ಯದ ಮತ್ತು ಕ್ರಿಸ್​ಮಸ್​ನ ಹಾಲಿಡೇ ಮೂಡ್​ನಲ್ಲಿದ್ದ ಉದ್ಯೋಗಿಗಳಿಗೆ ಎಂಥಾ ನ್ಯೂಸ್​ ಕೊಟ್ಟಿದ್ದಾರೆ ಎಂದು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್​ಗಳನ್ನು ನೀಡಿದ್ದಾರೆ.

ಅಮೆರಿಕದ ಡಿಜಿಟಲ್​ ಸರ್ವೀಸಸ್​ ಕಂಪೆನಿ ಬೆಟರ್​.ಕಾಮ್​​ನ ಸಿಇಒ ವಿಶಾಲ್​ ಗಾರ್ಗ್​ ಈ ಕೆಲಸ ಮಾಡಿದ್ದು, ಅಮೆರಿಕದಲ್ಲಿ ಮತ್ತು ಭಾರತದಲ್ಲಿ ಕೆಲಸ ಮಾಡುತ್ತಿರುವ 900 ನೌಕರರನ್ನು ನಾವು ತಕ್ಷಣದಿಂದಲೇ ಲೇ ಆಫ್ ಮಾಡಬೇಕಾಗಿದೆ. ಈ ಜೂಮ್​ ಕಾಲನ್ನು ಅಟೆಂಡ್​ ಮಾಡುತ್ತಿರೋ ಎಲ್ಲಾ ನೌಕರರೂ ಕೆಲಸ ಕಳೆದುಕೊಳ್ಳುತ್ತಿರುವ ನತದೃಷ್ಟ ಗುಂಪಿಗೆ ಸೇರಿದ್ದಾರೆ ಎಂದು ಘೋಷಿಸಿದ್ದಾರೆ.

ಲ್ಯಾಪ್​ಟಾಪಿನ ಸ್ಕ್ರೀನ್​ ಮೇಲೆ ಸಿಇಒ ಈ ಶಾಕಿಂಗ್​ ನ್ಯೂಸ್​ ಕೊಡುತ್ತಿರುವುದನ್ನು ಕೆಲಸದಿಂದ ತೆಗೆಯಲ್ಪಟ್ಟ ಉದ್ಯೋಗಿಯೊಬ್ಬರು ರೆಕಾರ್ಡ್​ ಮಾಡಿದ್ದಾರೆ. ಆ ವಿಡಿಯೋವನ್ನು ಡಿಸೆಂಬರ್​​ 4 ರಂದು ಉದ್ಯೋಗಿಯೊಬ್ಬರು ಪವರ್​ ಆಫ್ ಬನಾನಾ ಎಂಬ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅದಾಗಲೇ ಸುಮಾರು 50 ಸಾವಿರ ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.

ಮಾರ್ಕೆಟ್​ನ ಕೆಟ್ಟ ಸ್ಥಿತಿಯ ಕಾರಣದಿಂದಾಗಿ ನಿಮ್ಮನ್ನು ಲೇ ಆಫ್​ ಮಾಡಲಾಗುತ್ತಿದೆ. ಈ ಕುರಿತಾಗಿ ನಮ್ಮ ಎಚ್​​.ಆರ್​. ಇಲಾಖೆಯಿಂದ ಸದ್ಯದಲ್ಲೇ ಈ-ಮೇಲ್​ ಬರಲಿದೆ. ಕೆಲಸದಿಂದ ತೆಗೆಯುತ್ತಿರುವ ಎಲ್ಲರಿಗೂ ನಾಲ್ಕು ವಾರಗಳ ಸೆವೆರೆನ್ಸ್​ ಭತ್ಯೆ ಮತ್ತು ಒಂದು ತಿಂಗಳ ಪೂರ್ಣ ಬೆನೆಫಿಟ್ಸ್​ ನೀಡಲಾಗುವುದು ಎಂದು ಸಿಇಒ ಗಾರ್ಗ್​ ಹೇಳಿದ್ದಾರೆ. ಗಾರ್ಗ್​​ ಇದನ್ನು ಅನೌನ್ಸ್​ ಮಾಡುತ್ತಿರುವಂತೆಯೇ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಉದ್ಯೋಗಿಯು ಬೇಸರದ ಉದ್ಗಾರ ತೆಗೆಯುವುದೂ ಹಿನ್ನೆಲೆಯಲ್ಲಿ ಕೇಳಿಬರುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net