ಟೊಮ್ಯಾಟೊ ಕಾಯಲು ಬೌನ್ಸರ್ ನೇಮಿಸಿ ಪೇಚಿಗೆ ಸಿಲುಕಿದ ತರಕಾರಿ ವ್ಯಾಪಾರಿ

Bouncers
Published on

ವಾರಣಾಸಿ: ಟೊಮೊಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಉತ್ತರಪ್ರದೇಶದ ವಾರಾಣಾಸಿಯಲ್ಲಿ ವರ್ತಕನೋರ್ವ ತನ್ನ ಅಂಗಡಿಯಲ್ಲಿರುವ ತರಕಾರಿಯನ್ನು ಕಾಯಲು ಬೌನ್ಸರ್​ಗಳನ್ನು ನೇಮಿಸಿ ದೇಶಾದ್ಯಂತ ಸುದ್ದಿಯಾಗಿದ್ದ. ಇನ್ನು ಹೊಸ ವಿಚಾರಕ್ಕೆ ಬರುವುದಾದರೆ ಆತ ಬೌನ್ಸರ್​ಗಳನ್ನು ನೇಮಿಸಿದ್ದು, ತರಕಾರಿ ಕಾಯಲು ಅಲ್ಲ ಬದಲಿಗೆ ಬೆಲೆಯೇರಿಕೆ ವಿರುದ್ಧ ಪ್ರತಿಭಟಿಸಲು ಎಂದು ತಿಳಿದು ಬಂದಿದೆ.

ರಾಜ್​​ನಾರಾಯಣ್​ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಅಜಯ್​ ಫೌಜಿ ಎಂಬ ಹೆಸರಿನ ಸಮಾಜವಾದಿ ಪಕ್ಷದ ಮುಖಂಡ ನಿರಂತರ ಬೆಲೆಯೇರಿಕೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿ ವರಿಷ್ಠರ ಗಮನ ಸೆಳೆಯಲು ಹೋಗಿ ತರಕಾರಿ ವ್ಯಾಪಾರಿಯನ್ನು ಸಹ ಪೇಚಿಗೆ ಸಿಲುಕಿಸಿದ್ದಾನೆ.

ಈ ಕುರಿತು ಪೊಲೀಸರು ಅಂಗಡಿ ಮಾಲೀಕ ರಾಜ್​ ನಾರಾಯಣ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಜಯ್​ ಫೌಜಿ ಎಂಬಾತ ದಿಢೀರನೆ 500 ರೂಪಾಯಿ ಮೌಲ್ಯದ ಟೊಮೆಟೊ ಹಾಗೂ ಇಬ್ಬರು ಬೌನ್ಸರ್​ಗಳ ಜೊತೆ ಬಂದು ನನ್ನನ್ನು ಹೊರ ಕಳುಹಿಸಿ ಆತ ಕುಳಿತುಕೊಂಡು ವ್ಯಾಪಾರ ಮಾಡಲು ಶುರು ಮಾಡಿದ.

ಬಳಿಕ ನನ್ನ ಅಂಗಡಿಯ ಸುತ್ತ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆ ಎಂಬ ಫಲಕಗಳನ್ನು ಅಂಟಿಸಿ ಘೋಷಣೆಗಳನ್ನು ಕೂಗಲು ಶುರು ಮಾಡಿದ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತರಕಾರಿ ಅಂಗಡಿ ಮಾಲೀಕ ರಾಜ್​ ನಾರಾಯಣ್​ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮಾರಿಸಿಕೊಂಡಿರುವ ಆರೋಪಿ ಅಜಯ್​ ಫೌಜಿ, ಇಬ್ಬರು ಬೌನ್ಸರ್​ ಸೇರಿದಂತೆ ಓರ್ವನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ. ಈ ರೀತಿ ಹುಚ್ಚಾಟ ಮೆರೆಯುವವರನ್ನು ಸುಮ್ಮನೇ ಬಿಡುವ ಮಾತಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net