

ಭೋಪಾಲ್: ಬಾಲಿವುಡ್ ನಟ ವರುಣ್ ಧವನ್(Varun Dhawan) ತಮ್ಮ ಮುಂಬರುವ ಚಿತ್ರ ಬೇಬಿ ಜಾನ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಸಿನಿಮಾವು ಕ್ರಿಸ್‌ಮಸ್ ಸಮಯದಲ್ಲಿ ಅಂದರೆ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ಬಿಡುಗಡೆಗೆ ಒಂದು ದಿನ ಮೊದಲು ವರುಣ್ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ವರುಣ್ ಧವನ್ ಮಾತ್ರವಲ್ಲ ಜತೆಗೆ ಚಿತ್ರದ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ, ಸಿನಿಮಾದ ನಾಯಕಿ ಕೀರ್ತಿ ಸುರೇಶ್ ಕೂಡ ಉಪಸ್ಥಿತರಿದ್ದರು. ಚಿತ್ರದ ಸಂಪೂರ್ಣ ತಂಡವು ದೇವಾಲಯದ ಗರ್ಭಗುಡಿಯ ಹೊರಗೆ ಕುಳಿತುಕೊಂಡು ಭಗವಂತ ಮಹಾಕಾಳೇಶ್ವರನ ಆಶೀರ್ವಾದವನ್ನು ತೆಗೆದುಕೊಂಡಿದ್ದಾರೆ.
ಮಹಾಕಾಳೇಶ್ವರನ ದರ್ಶನ ಪಡೆದ ಬಳಿಕ ಮಾತನಾಡಿದ ನಟ ವರುಣ್ ಧವನ್, ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಚಿತ್ರಕ್ಕಿಂತ ದೇವರು ದೊಡ್ಡವನು. ಜನರು ಹೋಗಿ ಚಿತ್ರ ನೋಡುತ್ತಾರೆ ಮತ್ತು ಅವರಿಗೆ ಇಷ್ಟವಾಗಲಿ ಎಂದು ನಾನು ಪ್ರಾರ್ಥಿಸಿದೆ ಎಂದು ಹೇಳಿದರು.
ಸಿನಿಮಾ ಕುರಿತು ಹೇಳುವುದಾದರೆ ಬೇಬಿ ಜಾನ್ ಚಿತ್ರವು ತಮಿಳಿನ ‘ಥೇರಿ’ಯ ರಿಮೇಕ್ ಆಗಿದೆ. ಥೇರಿ ಸಿನಿಮಾದಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದು, ಈ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದರು. ಆದರೆ ಬೇಬಿ ಜಾನ್ ಅನ್ನು ಅಟ್ಲಿ ನಿರ್ಮಿಸಿದ್ದು, ಕಾಲಿಸ್ ನಿರ್ದೇಶಿಸಿದ್ದಾರೆ. ಸಿನಿಮಾದ ಮುಂಗಡ ಬುಕ್ಕಿಂಗ್ ಡಿಸೆಂಬರ್ 23ರಿಂದ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಚಿತ್ರ ಮುಂಗಡ ಬುಕ್ಕಿಂಗ್‌ನಲ್ಲಿ 2 ಕೋಟಿ 5 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ವರುಣ್ ಧವನ್ ಜತೆಗೆ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್‌ನಲ್ಲಿ ಅವರ ಸಣ್ಣ ನೋಟವೂ ಕಂಡುಬಂದಿದ್ದು ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ವರುಣ್ ಹೊಸ ಮತ್ತು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್)