

ರಾಜ್ಕೋಟ್: ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) (24ಕ್ಕೆ 5) ಐದು ವಿಕೆಟ್ ಸಾಧನೆಯ ಹೊರತಾಗಿಯೂ ಬ್ಯಾಟರ್ಗಳ ನೀರಸ ನಿರ್ವಹಣೆಯಿಂದಾಗಿ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು 26 ರನ್ಗಳಿಂದ ಪರಾಭವಗೊಂಡಿದೆ. ಎಡಗೈ ಬ್ಯಾಟರ್ ಬೆನ್ ಡಕೆಟ್ (51 ರನ್, 28 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಗೆಲುವು ಒಲಿಸಿಕೊಂಡ ಇಂಗ್ಲೆಂಡ್ ಸರಣಿ ಜೀವಂತವಿರಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗ ಸೂರ್ಯಕುಮಾರ್ ಬಳಗದ ಮುನ್ನಡೆ 2-1ಕ್ಕೆ ತಗ್ಗಿದೆ. ಈ ಮೂಲಕ ಸೂರ್ಯಕುಮಾರ್ ಹಾಗೂ ಕೋಚ್ ಗೌತಮ್ ಗಂಭೀರ್ ಕಾಂಬಿನೇಷನ್ನ ಅಜೇಯ ಓಟಕ್ಕೂ ಬ್ರೇಕ್ ಬಿದ್ದಿದೆ.
ನಿರಂಜನ್ ಷಾ ಕ್ರೀಡಾಂಗಣದಲ್ಲಿ ಜನವರಿ 28ರಂದು ನಡೆದ ಪಂದ್ಯದಲ್ಲಿ ಮೂರನೇ ಬಾರಿಗೆ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಆರಂಭಿಕ ಡಕೆಟ್ ಅರ್ಧಶತಕದ ನೆರವಿನಿಂದ ಸುಸ್ಥಿತಿಯಲ್ಲಿತ್ತು. ಆಗ ವರುಣ್ ಚಕ್ರವರ್ತಿ ದಾಳಿಗೆ ಮಧ್ಯಮ ಕ್ರಮಾಂಕ ನಲುಗಿತು. ಕೊನೆಗೆ ಲಿಯಾಮ್ ಲಿವಿಂಗ್ಸ್ಟೋನ್ (43 ರನ್, 24 ಎಸೆತ, 1 ಬೌಂಡರಿ, 5 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ ಇಂಗ್ಲೆಂಡ್ 9 ವಿಕೆಟ್ಗೆ 171 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ನಿರಂತರ ವಿಕೆಟ್ ಕಳೆದುಕೊಂಡು ಜತೆಯಾಟದ ಕೊರತೆ ಎದುರಿಸಿದ ಭಾರತ 9 ವಿಕೆಟ್ಗೆ 145 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಈ ಪಂದ್ಯದಲ್ಲಿ ಭಾರತದ ಪರ ಐದು ವಿಕೆಟ್ ಕಬಳಿಸುವ ಮೂಲಕ ಎಲ್ಲರ ಗಮನ ಸೆಳೆದ ವರುಣ್ ಚಕ್ರವರ್ತಿ (Varun Chakravarthy) ಅನಪೇಕ್ಷಿತ ದಾಖಲೆಗೆ ಕೊರಳೊಡ್ಡಿದ್ದಾರೆ. ವರುಣ್ ಚಕ್ರವರ್ತಿ (16 ಇನಿಂಗ್ಸ್) ಟಿ20 ಕ್ರಿಕೆಟ್ನಲ್ಲಿ ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ 3ನೇ ಭಾರತೀಯ ಹಾಗೂ ಎರಡನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ವರುಣ್ ಚಕ್ರವರ್ತಿ 2 ಬಾರಿ ಐದು ವಿಕೆಟ್ ಪಡೆದರೂ ಆ ಪಂದ್ಯಗಳನ್ನು ಭಾರತ ತಂಡ ಗೆಲ್ಲದಿರುವುದು ಅನಪೇಕ್ಷಿತ ದಾಖಲೆಗೆ ಕೊರಳೊಡ್ಡಿದ್ದಾರೆ.
2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವರುಣ್ 17 ರನ್ಗೆ 5 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದೀಗ 2025ರಲ್ಲಿ ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ವರುಣ್ 24 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಈ ಮ್ಯಾಚ್ನಲ್ಲೂ ಭಾರತ ತಂಡ 26 ರನ್ಗಳಿಂದ ಸೋಲನುಭವಿಸಿದೆ. ಈ ಮೂಲಕ ವರುಣ್ ಚಕ್ರವರ್ತಿ ಅನಪೇಕ್ಷಿತ ದಾಖಲೆಗೆ ಕೊರಳೊಡ್ಡಿದ್ದಾರೆ.