ವಾಣಿ ಪಪೂ ಕಾಲೇಜು ವಿಂಶತಿ ಸಂಭ್ರಮ : 11,12ರಂದು ವಾರ್ಷಿಕೋತ್ಸವ

New Project (2)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವಾಣಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೊಂಡು 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಂಶತಿ ಸಂಭ್ರಮ ಆಚರಿಸುತ್ತಿದ್ದು, ಡಿ.11, 12ರಂದು ವಾರ್ಷಿಕೋತ್ಸವ ನಡೆಯಲಿದೆ.

11ರಂದು ಕಿಯೋನಿಕ್ಸ್‌ನ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ವಿಂಶತಿ ಸಂಭ್ರಮ ಉದ್ಘಾಟಿಸಲಿದ್ದಾರೆ. ವಾಣಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಉತ್ಕರ್ಷ ಸಾಂಸ್ಕೃತಿಕ-ಶೈಕ್ಷಣಿಕ ಸ್ಪರ್ಧೆಯನ್ನು ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ ಆರಿಕೋಡಿ ಉದ್ಘಾಟಿಸಲಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಣ್ಣ ಸಿ.ಡಿ., ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯನಂದ ಗೌಡ ಭಾಗವಹಿಸಲಿದ್ದಾರೆ. ನಂತರ ಪ್ರತಿಭಾನ್ವಿತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ದ.ಕ. ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಮಾತೃ ಸೇವಾ ಸಂಘ ಅಧ್ಯಕ್ಷ ಲೋಕಯ್ಯ ಗೌಡ, ಉಜಿರೆ ‘ಕನಸಿನ ಮನೆ’ ಮಾಲೀಕ ಮೋಹನ್ ಕುಮಾರ್ ಕೆ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭಾಗವಹಿಸಲಿದ್ದಾರೆ.

12ರಂದು ವಿಂಶತಿ ವಿಚಾರಗೋಷ್ಠಿ ನಡೆಯಲಿದ್ದು, ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಬದಲಾದ ಕಾಲಘಟ್ಟದಲ್ಲಿ ಶಿಕ್ಷಣದ ಸವಾಲುಗಳು ವಿಚಾರದ ಕುರಿತು ಮಾತನಾಡಲಿದ್ದಾರೆ. ಅಪರಾಹ್ನ ನಡೆಯುವ ವಿಂಶತಿ ಸಂಭ್ರಮದಲ್ಲಿ ಬೆಳಾಲಿನ ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ವಾಣಿ ಪಪೂ ಕಾಲೇಜು ನಡೆದು ಬಂದ ಹೆಜ್ಜೆಗಳ ಕುರಿತು ಸಿಂಹಾವಲೋಕನ ಮಾಡಲಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಚಾರ್ಯ ಡಾ. ಬಿ.ಎ.ಕುಮಾರ ಹೆಗ್ಡೆ, ವಾಣಿ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ವಿಂಶತಿ ಸಂಭ್ರಮದ ಎರಡೂ ದಿನಗಳಲ್ಲೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 12ರಂದು ಸಂಜೆ 6.30 ರಿಂದ ಚಾ-ಪರ್ಕ ಕಲಾವಿದರು ಕುಡ್ಲ ಅವರಿಂದ ಏರ್ಲಾ ಗ್ಯಾರಂಟಿ ಅತ್ತ್ ತುಳು ನಾಟಕ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net