ನೀರಿನಲ್ಲಿ ಮುಳುಗಿ ಬಾಲಕರು ಸಾವು

boys
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಉಡುಪಿ ಜಿಲ್ಲೆಯ ಹೆಬ್ರಿ ಬೆಳ್ವೆಯ ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ ಭಾನುವಾರ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಗುಮ್ಮೋಲ ಹರ್ಗಗುಂಡಿ ರಾಮ ನಾಯ್ಕ-ಕಾವೇರಿ ಬಾ ದಂಪತಿ ಪುತ್ರ ಜಯಂತ್ ನಾಯ್ಕ(19) ಹಾಗೂ ಗೋಳಿಯಂಗಡಿ ಶ್ರೀದುರ್ಗಾ ಜುವೆಲ್ಲರ್ಸ್‌ ಮಾಲೀಕ ಶ್ರೀಧರ ಆಚಾರ್ಯ ಬೆಳ್ವೆ-ಶ್ರೀಮತಿ ಆಚಾರ್ಯ ದಂಪತಿ ಪುತ್ರ ಶ್ರೀಶ ಆಚಾರ್ಯ(14)ಮೃತರು. ಇವರಿಬ್ಬರು ಸ್ನೇಹಿತರಾಗಿದ್ದು, ಭಾನುವಾರ ಮಧ್ಯಾಹ್ನ 1 ಗಂಟೆಗೆ ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ ಸ್ನಾನಕ್ಕೆ ತೆರಳಿದ್ದರು. ಶ್ರೀಶ ಆಚಾರ್ಯ ಕಲ್ಲಿನ ಮೇಲಿನಿಂದ ಕಾಲು ಜಾರಿ ಬಿದ್ದು ಮುಳುಗಿದ್ದು, ಜಯಂತ್ ನಾಯ್ಕ ಆತನನ್ನು ರಕ್ಷಿಸಲು ಮುಂದಾಗಿ, ನೀರಿನಿಂದ ಮೇಲೆ ಬರಲು ಆಗದೇ ಇಬ್ಬರೂ ಮೃತಪಟ್ಟರು.

ಹೊಳೆಯ ದಡದಲ್ಲಿದ್ದ ಇನ್ನಿಬ್ಬರು ಬಾಲಕರು ಓಡಿ ಹೋಗಿ ಸಮೀಪದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ, ನಾಗರಾಜ ನಾಯ್ಕ ಅಲ್ಬಾಡಿ ಹಾಗೂ ಚೋಣ ಎಂಬುವರು ನೀರಿಗಿಳಿದು ಇಬ್ಬರನ್ನೂ ಮೇಲಕ್ಕೆತ್ತಿದ್ದಾರೆ. ಪ್ರಾಣ ಉಳಿಸಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ.

ಜಯಂತ್ ನಾಯ್ಕ ಗುಮ್ಮೋಲ ಯಕ್ಷಗಾನ ಕಲಾವಿದರಾಗಿದ್ದರು. ಶ್ರೀಶ ಆಚಾರ್ಯ ಬೆಳ್ವೆ ಹೆಬ್ರಿ ಎಸ್‌ಆರ್‌ಎಸ್ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ. ಸರಳ ಸ್ವಾಭಾವದ ಈತ ಪರಿಸರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಇವರಿಬ್ಬರು ಸ್ಥಳೀಯ ಭಜನಾ ತಂಡದಲ್ಲಿ ಸ್ನೇಹಿತರಾಗಿದ್ದರು.

ಜಯಂತ್ ನಾಯ್ಕ ಅವರು ತಂದೆ, ತಾಯಿ, ತಂಗಿಯನ್ನು ಅಗಲಿದ್ದಾರೆ. ಶ್ರೀಶ ಆಚಾರ್ಯ ತಂದೆ, ತಾಯಿ, ಅಕ್ಕನನ್ನು ಅಗಲಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರು. ಶಂಕರನಾರಾಯಣ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್, ಎಸ್‌ಐ ಶಂಭುಲಿಂಗಯ್ಯ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಮಹಜರು ನಡೆಸಿದರು. ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಶವವನ್ನು ಹಸ್ತಾಂತರಿಸಿದರು. ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ನೂರಾರೂ ಮಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net