

ಬೆಂಗಳೂರು: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಹಾಗೂ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರಗಳ ಬಗ್ಗೆ ತನಿಖೆಗೆ ಅಧಿಕಾರಿ ಮನೀಷ್ ಖರ್ಬೀಕರ್ ನೇತೃತ್ವದ ರಾಜ್ಯ ಸರ್ಕಾರ ವಿಶೇಷಾ ತನಿಖಾ ತಂಡ (ಎಸ್ಐಟಿ) ರಚಿಸಿದೆ. ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳಿರುವ ಎಸ್ಐಟಿ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರಿನ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಶಿವಮೊಗ್ಗ ವಿನೋಬ ನಗರದ ಕೆಂಚಪ್ಪ ಲೇಔಟ್ ಬಳಿಯಿರುವ ತಮ್ಮ ನಿವಾಸದಲ್ಲಿ ಮೇ.26ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.
ಈ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಅವರು ಸಭೆ ನಡೆಸಿದ್ದು, ಪ್ರಕರಣವನ್ನು ಎಸ್ಐಟಿಗೆ ವಹಿಸಲು ತೀರ್ಮಾನಿಸಿದ್ದಾರೆ. ಅದರಂತೆ, ಎಡಿಜಿಪಿ ಮನೀಶ್ ಕಬೀರ್ಕರ್ ನೇತೃತ್ವದಲ್ಲಿ ಶಿವಪ್ರಕಾಶ್, ಹರಿರಾಮ್ ಶಂಕರ್ ಹಾಗೂ ರಾಘವೇಂದ್ರ ಹೆಗಡೆ ಅವರ ತಂಡವು ಪ್ರಕರಣದ ಕುರಿತು ತನಿಖೆ ನಡೆಸಲಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 87 ಕೋಟಿ ರೂಪಾಯಿಯನ್ನು ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವೆಡೆಯಲ್ಲಿರುವ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾಗಿದೆ. ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಪ್ರತಿಪ್ಷಕಗಳು ಆಗ್ರಹಿಸುತ್ತಿವೆ.
ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಎಸ್ಐಟಿ ರಚಿಸಿದ್ದು, ಇದರ ವರದಿ ಆಧಾರದ ಮೇಲೆಯೇ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕೋ, ಬೇಡವೋ ಎಂಬುದನ್ನು ಸಿದ್ದರಾಮಯ್ಯ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಎಸ್ಐಟಿ ವರದಿ ಈಗ ಕುತೂಹಲ ಕೆರಳಿಸಿದೆ.