

ನವದೆಹಲಿ: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ಕಾಂಗ್ರೆಸ್ ಪಕ್ಷದ ನೇತೃತ್ವದ ಇಂಡಿಯ ಬಣದಿಂದ ದೇಶದ ಪ್ರಧಾನಿಯಾಗಿ ರಾಹುಲ್ ಗಾಂಧಿ ಅವರ ಆಯ್ಕೆಗೆ ನನ್ನ ಬೆಂಬಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಜೂನ್ 6ರ ವರೆಗೆ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಗೆ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಸತತ 5 ಗೆಲುವಿನ ನಂತರ ಸೋನಿಯಾ ಗಾಂಧಿ ಅವರಿಂದ ತೆರವಾದ ರಾಯ್ಬರೇಲಿಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೊನೆಕ್ಷಣದಲ್ಲಿ ಚುನಾವಣೆಯಿಂದ ಹೊರಗುಳಿದಿದ್ದರು. ಅವರ ಬದಲಾಗಿ ಅವರ ಸಹೋದರ ರಾಹುಲ್ ಗಾಂಧಿ ರಾಯ್ಬರೇಲಿಯಿಂದ ಸ್ಪರ್ಧಿಸಿದ್ದರು. ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಎನ್ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಈ ಲೋಕಸಭೆ ಚುನಾವಣೆಗೂ ಮೊದಲು ಎರಡು ' ಭಾರತ್ ಜೋಡೋ ಯಾತ್ರೆ'ಗಳನ್ನು ಮುನ್ನಡೆಸಿದರು. ದೇಶಾದ್ಯಂತ ಪ್ರಚಾರ ನಡೆಸಿದ್ದರು.ಯಾವುದೇ ಹಿಂಜರಿಕೆಯಿಲ್ಲದೆ ಪ್ರಧಾನಿ ಮೋದಿ ವಿರುದ್ಧ ನೇರ ದಾಳಿಯನ್ನು ಮಾಡುವ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆಯಾಗುತ್ತಾರೆ ಎಂದು ತಿಳಿಸಿದ್ದಾರೆ.
''ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂಬುದು ನನ್ನ ಆಯ್ಕೆ. ಅವರು ನನ್ನ ಆಯ್ಕೆ ಮತ್ತು ಅವರು ಯುವಕರನ್ನು ಪ್ರತಿನಿಧಿಸುತ್ತಾರೆ ಮತ್ತು ದೇಶದ ಉದ್ದ ಮತ್ತು ಅಗಲವನ್ನು ಪ್ರತಿನಿಧಿಸುತ್ತಾರೆ" ಎಂದು ಖರ್ಗೆ ಅವರು ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ಅನೇಕರು ಪ್ರಧಾನಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ನೋಡುತ್ತಾರೆ. “ನಾವು ಒಟ್ಟಾಗಿ ಹೋರಾಡುತ್ತೇವೆ ಎಂದು ಇಂಡಿಯ ಬಣದವರಾದ ನಾವು ನಿರ್ಧರಿಸಿದ್ದದೇವೆ. ಈ ಬಣ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಯಾರು ಎಂದು ಜಂಟಿಯಾಗಿ ನಿರ್ಧರಿಸಲಾಗುತ್ತದೆ.” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಳೆದ ವಾರವಷ್ಟೇ ಖರ್ಗೆ ಅವರು ಪ್ರಧಾನಿ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. "ಇದು ' ಕೌನ್ ಬನೇಗಾ ಕೋಟ್ಯಾಧಿಪತಿ' ಎಂದು ಕೇಳುವಂತಿದೆ ಎಂದು ಹಾಸ್ಯಮಯವಾಗಿ ಉತ್ತಿರಿಸಿದರು.