

Vadodara Car Crash: ಮಾ.13ರಂದು ಗುಜರಾತ್ನ ವಡೋದರಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತ ಪ್ರಕರಣದಲ್ಲಿ ಬಂಧಿತನಾಗಿದ್ದ ಕಾನೂನು ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ, ಅಪಘಾತ ಸಂಭವಿಸಿದ ಕ್ಷಣದಲ್ಲಿ ತಾನು ಮದ್ಯಪಾನ ಮಾಡಿರಲಿಲ್ಲ. ಯಾವುದೇ ಅಮಲಿನಲ್ಲಿ ನಾನು ಕಾರು ಚಲಾಯಿಸಲಿಲ್ಲ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದ. ಆದರೆ, ಎಫ್‌ಎಸ್‌ಎಲ್ ವರದಿಯಲ್ಲಿ ಶಾಕಿಂಗ್ ಸಂಗತಿಯೊಂದು ಹೊರಬಿದ್ದಿದ್ದು, ಆತ ಮದ್ಯದ ಬದಲು ಏನು ಸೇವಿಸಿದ್ದ ಎಂಬುದು ದೃಢವಾಗಿದೆ.
100ಕ್ಕಿಂತ ಹೆಚ್ಚು ವೇಗದಲ್ಲಿ ತನ್ನ ಸ್ನೇಹಿತನೊಂದಿಗೆ ಕಾರು ಚಲಾಯಿಸಿಕೊಂಡು ಬಂದ ಆರೋಪಿ ರಕ್ಷಿತ್, ಓರ್ವ ಮಹಿಳೆ ಜೀವವನ್ನು ಬಲಿ ಪಡೆದಿದ್ದಲ್ಲದೇ, 7 ಜನರ ಗಂಭೀರ ಸ್ಥಿತಿಗೆ ಕಾರಣನಾಗಿದ್ದಾನೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾದ ಬೆನ್ನಲ್ಲೇ ಕಾರಿನಿಂದ ಹೊರಗಿಳಿದು, 'ಇನ್ನೊಂದು ರೌಂಡ್..ಇನ್ನೊಂದು ರೌಂಡ್' ಎಂದು ಚಿರಾಡಿದ್ದ ರಕ್ಷಿತ್, ಖಾಕಿ ವಿಚಾರಣೆಯಲ್ಲಿ ತಾನು ಮದ್ಯ ಸೇವಿಸಿಲ್ಲ ಎಂದಿದ್ದ. ಆದರೆ, ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸಿದ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್), 20 ದಿನಗಳ ಬಳಿಕ ಪ್ರಾಥಮಿಕ ವರದಿಯನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ, ಆತ ಗಾಂಜಾ ಸೇವಿಸಿರುವುದು ದೃಢವಾಗಿದೆ.
ಈ ವರದಿ ಹಿನ್ನೆಲೆ ಪೊಲೀಸರು ರಕ್ಷಿತ್ ಮತ್ತು ಆತನ ಸ್ನೇಹಿತರ ವಿರುದ್ಧ ADPS (ಮಾದಕ ವಸ್ತು ಮತ್ತು ಮನೋವಿಕೃತ ವಸ್ತುಗಳು) ಕಾಯ್ದೆ 1985ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185ರ ಅಡಿಯಲ್ಲಿ ರಕ್ಷಿತ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದು, ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸಿದ್ದಾರೆ. ರಕ್ಷಿತ್ ಈಗಾಗಲೇ ವಡೋದರಾ ಕೇಂದ್ರ ಕಾರಾಗೃಹದಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದಾನೆ,(ಏಜೆನ್ಸೀಸ್).