

Uttarkashi floods: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಮೇಘಸ್ಫೋಟ ಸದ್ಯ ಸ್ಥಳೀಯರಿಗೆ ನರಕಯಾತನೆ ಉಂಟುಮಾಡಿದೆ. ದಿಢೀರ್ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿಹೋಗಿದ್ದು, ಹಲವರು ದುರಂತ ಅಂತ್ಯ ಕಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 70 ಜನರನ್ನು ರಕ್ಷಿಸಿರುವ ಭಾರತೀಯ ಸೇನೆ, 50ಕ್ಕೂ ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.
ದುರಂತದಲ್ಲಿ ಸಿಲುಕಿರುವವರನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಹಲವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಲು ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಹಗಲು ರಾತ್ರಿ ಶ್ರಮಿಸುತ್ತಿವೆ. ಇಲ್ಲಿಯವರೆಗೆ 70 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಇನ್ನೂ 50ಕ್ಕೂ ಅಧಿಕ ಸ್ಥಳೀಯರು ಪತ್ತೆಯಾಗಿಲ್ಲ ಎಂದು ಸೇನೆ ತಿಳಿಸಿದೆ.
ಕಣ್ಮರೆಯಾದವರಲ್ಲಿ 9 ಸೇನಾ ಸಿಬ್ಬಂದಿ (ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ಎಂಟು ಜವಾನರು) ಸೇರಿದ್ದಾರೆ. ವರದಿಗಳ ಪ್ರಕಾರ, ದುರಂತದಲ್ಲಿ ಐವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರು ಸೇನಾ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಹೆಲಿಕಾಪ್ಟರ್ ಮೂಲಕ ಡೆಹ್ರಾಡೂನ್‌ಗೆ ಮೂಲಕ ಕರೆದೊಯ್ಯಲಾಗಿದೆ.
ಪ್ರಕೃತಿ ವಿಕೋಪಕ್ಕೆ ತುತ್ತಾದ ಧರಾಲಿ ಗ್ರಾಮದಲ್ಲಿ, ಮಣ್ಣು ಮತ್ತು ಬಂಡೆಗಳ ರಾಶಿಗಳು 50ರಿಂದ 60 ಅಡಿ ಎತ್ತರದಿಂದ ಕುಸಿದಿದೆ. ಕಾಣೆಯಾದವರು ಮಣ್ಣು ಮತ್ತು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರಬಹುದು ಎಂಬ ಆತಂಕ ರಕ್ಷಣಾ ಪಡೆಗೆ ಕಾಡುತ್ತಿದೆ. ರಾಜ್ಯದ ಬರ್ತ್ವಾರಿ, ಹರ್ಸಿಲ್, ಗಂಗ್ನಾನಿ ಮತ್ತು ಧರಾಲಿಯಂತಹ ಪ್ರದೇಶಗಳಿಗೆ ಹೋಗುವ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ.
ಈ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ಸೇನೆ ಮತ್ತು ನಾಗರಿಕ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಚಿನೂಕ್ ಮತ್ತು Mi-17 ನಂತಹ ಭಾರೀ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಹವಾಮಾನ ಅನುಕೂಲಕರವಾದ ತಕ್ಷಣ ನಾಗರಿಕರನ್ನು ಸ್ಥಳಾಂತರಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಸೇನೆ ತಿಳಿಸಿದೆ,(ಏಜೆನ್ಸೀಸ್).