

The Kerala Story: ಇತ್ತೀಚೆಗೆಷ್ಟೇ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಯಿತು. ಈ ಪೈಕಿ 2 ವಿಭಾಗಗಳಲ್ಲಿ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಪ್ರಶಸ್ತಿಗಳು ಲಭಿಸಿತು. ಅಂದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸದ್ದು ಮಾಡಿದ್ದ ಚಿತ್ರವು, ಕಥೆಯ ಮೂಲಕ ಭಾರೀ ವಿವಾದಕ್ಕೆ ಗುರಿಯಾಗಿತ್ತು. ನಟಿ ಅದಾ ಶರ್ಮ ಅಭಿನಯದ ಈ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದಕ್ಕೆ ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಗರಂ ಆಗಿದ್ದಾರೆ.
'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಕೇಂದ್ರ ಸರ್ಕಾರ ಎರಡು ಪ್ರಶಸ್ತಿ ಕೊಟ್ಟಿದ್ದು ಸರಿಯಲ್ಲ ಎಂದು ನಿರ್ದೇಶಕರು ಆಕ್ಷೇಪಿಸಿದ್ದಾರೆ. ಈ ಚಿತ್ರದಲ್ಲಿ ಸತ್ಯಾಸತ್ಯೆತೆಗಳನ್ನು ತಪ್ಪಾಗಿ ತೋರಿಸಲಾಗಿದೆ. ಚಿತ್ರಕಥೆ, ನಿರ್ದೇಶನ ಮತ್ತು ನಟನೆಯ ವಿಷಯದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಮಾನದಂಡಗಳನ್ನು ಇದು ಪೂರೈಸಿಲ್ಲ. ಇಂಥಾ ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸುವುದು ಪ್ರಶಸ್ತಿಗಳ ಮೌಲ್ಯವನ್ನು ಕಡಿಮೆ ಮಾಡಿದಂತೆಯೇ ಸರಿ ಎಂದಿದ್ದಾರೆ.
ಈ ಕುರಿತು ಸಂದರ್ಶನದಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ನಿರ್ದೇಶಕ ಜಿಯೋ ಬೇಬಿ, "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಆಡಳಿತ ಪಕ್ಷಗಳ ಕಾರ್ಯಸೂಚಿಯನ್ನು ಬೆಂಬಲಿಸುವಂತ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಕಳೆದ ಹತ್ತು ವರ್ಷಗಳಿಂದ ಈ ಪದ್ಧತಿಯನ್ನು ನೋಡುತ್ತಿದ್ದೇವೆ. ಅಂತಹ ಸ್ಕ್ರಿಪ್ಟ್ಗಳನ್ನು ಪ್ರೋತ್ಸಾಹ ಮಾಡಲಾಗುತ್ತಿದೆ. ಈ ರೀತಿಯಿಂದ ಪ್ರಶಸ್ತಿಗಳು ತಮ್ಮ ಪ್ರಾಮುಖ್ಯತೆ, ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಸಿನಿಮಾಗಳ ಅರ್ಹತೆಯ ಆಧಾರದ ಮೇಲೆ ಪರಿಗಣಿಸಲಾಗುವುದಿಲ್ಲ ಎಂದಮೇಲೆ ಈ ಪ್ರಶಸ್ತಿಗಳು ಏಕೆ?" ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).