ಇಂಡೋ-ಪೆಸಿಫಿಕ್​ ಭಾಗದಲ್ಲಿ ಭದ್ರತೆ, ಅಭಿವೃದ್ಧಿಗೆ ಆದ್ಯತೆ - ಪ್ರಧಾನಿ ಮೋದಿಯವರನ್ನು ಭೇಟಿಯಾದ ಯುಎಸ್​ ರಕ್ಷಣಾ ಸಚಿವ, ವಿದೇಶಾಂಗ ಕಾರ್ಯದರ್ಶಿ

PM
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ "ಎರಡು ಪ್ಲಸ್ ಟು ಮಾತುಕತೆ" ನಂತರ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು. ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಮತ್ತು ಅಭಿವೃದ್ಧಿಯ ಬಗ್ಗೆಯೂ ವ್ಯಾಪಕ ಮಾತುಕತೆಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶವು ಆಸ್ಟ್ರೇಲಿಯಾ, ಅಮೆರಿಕಾ ಸೇರಿದಂತೆ ಯುರೋಪ್ ಮತ್ತು ಏಷ್ಯಾಕ್ಕೆ ಪಿನ್ ಪಾಯಿಂಟ್ ಆಗಿದೆ. ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯವನ್ನು ಕೊನೆಗೊಳಿಸಲು ಅಮೆರಿಕ ಭಾರತದೊಂದಿಗೆ ಕೈಜೋಡಿಸಿದೆ.

ಇಂಡೋ-ಪೆಸಿಫಿಕ್ ಪ್ರದೇಶವು ಇತರ ಯುರೋಪಿಯನ್ ರಾಷ್ಟ್ರಗಳಿಗೆ ಭಾರತದ ಕಡೆಗೆ ತಮ್ಮ ಒಲವನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ಈ ಪ್ರದೇಶವು ಇಡೀ ಪ್ರಪಂಚದ ಅಭಿವೃದ್ಧಿ ಮತ್ತು ವ್ಯಾಪಾರಕ್ಕೆ ಪ್ರಮುಖ ಮಾರ್ಗವಾಗಿದೆ ಎಂಬ ಅಂಶಗಳ ಮೇಲೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿಯವರ ಭೇಟಿ ಆರ್ಥಿಕತೆಯನ್ನು ಬಲಪಡಿಸುವ ಮೂಲಾಧಾರವಾಗಿದೆ ಎಂದು ತಮ್ಮ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ ಆಂಟೋನಿ ಬ್ಲಿಂಕೆನ್, “ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ಮತ್ತು ಸುರಕ್ಷತೆ ಉತ್ತೇಜಿಸುವ ಕುರಿತು ಯುಎಸ್ ಮತ್ತು ಭಾರತ ಹೇಗೆ ಕೆಲಸ ಮಾಡಬೇಕಿದೆ ಎಂಬುದರ ಕುರಿತು ಚರ್ಚಿಸಿದ್ದೇನೆ. ನಾನು ತಂತ್ರಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ಪರಸ್ಪರ ಸಹಕಾರ ಮುಂದುವರಿಸಲು ಎದುರುನೋಡುತ್ತೇವೆ" ಎಂದಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆಯೂ ಚರ್ಚೆ: ಭಾರತ-ಅಮೆರಿಕ ‘2+2’ ಸಚಿವರ ಮಾತುಕತೆಯ ಕೊನೆಯಲ್ಲಿ ಇಸ್ರೇಲ್ ಮಿಲಿಟರಿ ಕ್ರಮದಿಂದಾಗಿ ಗಾಜಾದಲ್ಲಿ ನಾಗರಿಕರ ಸಾವುಗಳನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ತೀವ್ರವಾಗಿ ಖಂಡಿಸಿದರು, ಒತ್ತೆಯಾಳುಗಳನ್ನು (ಹಮಾಸ್) ಬಿಡುಗಡೆ ಮಾಡುವ ಪ್ರಯತ್ನಗಳ ಮೇಲೆ ನಾವು ಗಮನಹರಿಸುವುದನ್ನು ಮುಂದುವರಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net