ಕರೊನಾ ಲಸಿಕೆ ಎಲ್ಲೇ ತಯಾರಾಗಲಿ ಖರೀದಿಸುತ್ತಿದೆ ಅಮೆರಿಕ...! 10 ಕೋಟಿ ಡೋಸ್​ಗೆ 14,625 ಕೋಟಿ ರೂ. ಒಪ್ಪಂದ

Vaccine
Published on

ವಾಷಿಂಗ್ಟನ್​: ಕರೊನಾ ಲಸಿಕೆ ಎಲ್ಲೇ ತಯಾರಾಗಲಿ ಅದು ಅಮೆರಿಕನ್ನರಿಗೆ ಬೇಕೇ ಬೇಕು ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದಂತಿದೆ. ಹೀಗಾಗಿ ನೂರಾರು ಕೋಟಿ ಡಾಲರ್​ಗಳನ್ನು ಖರ್ಚು ಮಾಡುತ್ತಿದೆ. ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ.

ಅಮೆರಿಕದ್ದೇ ಕಂಪನಿಯಾದ ಮಾಡೆರ್ನಾ ಈಗಾಗಲೇ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಂಪನಿಗೆ ಎಲ್ಲ ರೀತಿಯ ಸಹಾಯವನ್ನು ಅಮೆರಿಕ ನೀಡುತ್ತಿದೆ. ಇದರ ಲಸಿಕೆ ಈಗ ಅಂತಿಮ ಹಂತದ ಕ್ಲಿನಿಕಲ್​ ಟ್ರಯಲ್​ನಲ್ಲಿದೆ.

ಇನ್ನೊಂದೆಡೆ, ಫೈಝರ್​ ಹಾಗೂ ಜರ್ಮನ್​ ಬಯೋಟೆಕ್​ ಕಂಪನಿ ಬಯಾನ್​ ಟೆಕ್​ ಕಂಪನಿ ಜತೆಗೂ ಲಸಿಕೆ ಖರೀದಿಗೂ ಭಾರಿ ಮೊತ್ತ ವ್ಯಯಿಸುತ್ತಿದೆ. ಒಟ್ಟು 10 ಕೋಟಿ ಡೋಸ್​ ಲಸಿಕೆಯನ್ನು ಪೂರೈಸಲು 14,625 ಕೋಟಿ ರೂ. (1.95 ಬಿಲಿಯನ್​ ಡಾಲರ್​) ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ಇದರ ಪ್ರಕಾರ ಎರಡೂ ಕಂಪನಿಗಳ ಲಸಿಕೆ ಅಕ್ಟೋಬರ್​ ವೇಳೆಗೆ ಸಿದ್ಧಗೊಳ್ಳಲಿದೆ. ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದೆ. ಮುಂದಿನ ವರ್ಷದ ಕೊನೆಯ ಹೊತ್ತಿಗೆ 130 ಕೋಟಿ ಡೋಸ್​ ಉತ್ಪಾದಿಸಲಿದೆ. ಒಪ್ಪಂದ ಪ್ರಕಾರ ಹೆಚ್ಚುವರಿಯಾಗಿ 50 ಕೋಟಿ ಡೋಸ್​ ಖರೀದಿಗೂ ಅವಕಾಶವಿದೆ.

ಅಮೆರಿಕ ಸರ್ಕಾರದೊಂದಿಗೆ ಒಪ್ಪಮದ ಮಾಡಿಕೊಳ್ಳುತ್ತಿದ್ದಂತೆ ಫೈಝರ್​ ಷೇರುಗಳ ಮೌಲ್ಯ ಶೇ.4 ಹಾಗೂ ಬಯಾನ್​ ಟೆಕ್​ ಸಂಸ್ಥೆಯ ಷೇರುಗಳ ಬೆಲೆ ಶೇ.6 ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net