ಆಕ್ಸ್​ಫರ್ಡ್​ ಕರೊನಾ ಲಸಿಕೆ ಯಶಸ್ವಿಯಾದರೆ ಭಾರತಕ್ಕೇನು ಲಾಭ? ಎಲ್ಲಿ ಉತ್ಪಾದನೆಯಾಗುತ್ತೆ ಗೊತ್ತಾ?

Serum institute of India
Published on

ನವದೆಹಲಿ: ಆರಂಭಿಕ ಹಂತದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರುವ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ (ಮಾನವರ ಮೇಲೆ ಪ್ರಯೋಗ) ಭಾರತದಲ್ಲೂ ಆರಂಭವಾಗಲಿದೆ.

ಇದಕ್ಕಾಗಿ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಭಾರತೀಯ ಔಷಧ ಮಹಾನಿಯಂತ್ರಕರ (ಡಿಜಿಸಿಐ) ಒಪ್ಪಿಗೆ ಪಡೆಯಲಿದೆ.ಜತೆಗೆ ಉತ್ಪಾದನೆಯನ್ನೂ ಆರಂಭಿಸಲಿದೆ. ಏಕೆಂದರೆ ಸಿರಂ ಇನ್​ಸ್ಟಿಟ್ಯೂಟ್​ ಈಗಾಗಲೇ ಸಂಸ್ಥೆಯು ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬ್ರಿಟನ್ನಿನ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಉತ್ಪಾದನೆ ಒಪ್ಪಂದ ಮಾಡಿಕೊಂಡಿದೆ.

ಇನ್ನೊಂದು ವಾರದಲ್ಲಿ ಡಿಜಿಸಿಎ ಪರವಾನಗಿ ಪಡೆದುಕೊಳ್ಳಲಾಗುತ್ತದೆ. ಇದಾಗುತ್ತಿದ್ದಂತೆ ಕ್ಲಿನಿಕಲ್​ ಟ್ರಯಲ್​ ಆರಂಭವಾಗಲಿದೆ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯ ನಿರ್ವಹಣಾಧಿಕಾರಿ ಆದಾರ್​ ಪೂನಾವಾಲಾ ಹೇಳಿದ್ದಾರೆ.

ಆಕ್ಸ್​ಫರ್ಡ್​ ಲಸಿಕೆ ಕರೊನಾ ರೋಗಿಗಳಲ್ಲಿ ಪ್ರತಿರೋಧಕ ಶಕ್ತಿ ಸೃಷ್ಟಿಸುತ್ತಿದೆ ಹಾಗೂ ಇದು ಮಾನವರ ಬಳಕೆಗೆ ಸುರಕ್ಷಿತವಾಗಿದೆ ಎಂದು ಫಲಿತಾಂಶದಲ್ಲಿ ಗೊತ್ತಾಗಿದೆ. ಸಾವಿರಾರು ಜನರನ್ನು ಒಳಗೊಂಡ ಇದರ ಮೂರನೇ ಹಂತದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಾರತಕ್ಕೇನು ಲಾಭ: ಆಸ್ಟ್ರಾ ಜೆನೆಕಾ ಕಂಪನಿಯೊಂದಿಗೆ ಸಿರಂ ಇನ್​ಸ್ಟಿಟ್ಯೂಟ್​ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಇದರಂತೆ ವರ್ಷದ ಕೊನೆವರೆಗೆ ಆರು ಕೋಟಿ ಡೋಸ್​ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ. ಮುಂದಿನ ಒಂದು ವರ್ಷದಲ್ಲಿ ಇದರ ಪ್ರಮಾಣ 100 ಕೋಟಿ ಡೋಸ್​ ಉತ್ಪಾದನೆ ಗುರಿ ಹೊಂದಲಾಗಿದೆ.

ಒಪ್ಪಂದದನ್ವಯ ಆರು ಕೋಟಿ ಡೋಸ್​ನಲ್ಲಿ ಕನಿಷ್ಠ 20-30 ಲಕ್ಷ ಡೋಸ್​ ಭಾರತದ ಬಳಕೆಗೆ ಸಿಗಲಿದೆ. ಹೀಗಾಗಿ ಆಕ್ಸ್​ಫರ್ಡ್​ ಲಸಿಕೆ ಯಶಸ್ವಿಯಾದಲ್ಲಿ ಬ್ರಿಟನ್​ ಜತೆಗೆ ಭಾರತಕ್ಕೂ ಲಸಿಕೆ ಏಕಕಾಲದಲ್ಲಿ ಅಲಬ್ಯವಾಗಲಿದೆ.

ಇದಲ್ಲದೇ ಜಾಗತಿಕವಾಗಿ ಲಸಿಕೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇತರ ನಾಲ್ಕು ಕಂಪನಿಗಳು ಕೂಡ ಭಾರತದ ವಿವಿಧ ಔಷಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದಲ್ಲದೇ, ದೇಶೀಯ ಕಂಪನಿ ಭಾರತ್​ ಬಯೋಟೆಕ್​, ಜೈಡಸ್​ ಕ್ಯಾಡಿಲ್ಲಾ ಸೇರಿ ಭಾರತದಲ್ಲಿಯೇ ಏಳು ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net