

ನವದೆಹಲಿ: ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಸ್ಟ್ರಾಜೆನೆಕಾ ಕಂಪನಿಯೊಮದಿಗೆ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಕರೊನಾ ನಿಗ್ರಹ ಲಸಿಕೆ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ನ ಫಲಿತಾಂಶ ಪ್ರಕಟಗೊಂಡಿದೆ.
ವೈದ್ಯಕೀಯ ನಿಯತಕಾಲಿಕ ಲಾನ್ಸೆಟ್ ಈ ಫಲಿತಾಂಶವನ್ನು ಪ್ರಕಟಿಸಿದ್ದು, ಲಸಲಿಕೆಯು ಮಾನವರ ಬಳಕೆಗೆ ಸುರಕ್ಷಿತ, ಸಹಿಷ್ಣು ಗುಣ ಹೊಂದಿದೆ. ಜತೆಗೆ, ಈವರೆಗೆ ಕಂಡು ಬಂದಿರುವ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂದು ಬಣ್ಣಿಸಿದೆ.
ದೇಹಕ್ಕೆ ಪ್ರವೇಶಿಸಿದ ಕೂಡಲೇ ಪ್ರತಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸಿ ವೈರಸ್ ವಿರುದ್ಧ ಪ್ರತಿಕ್ರಿಯೆ ನಿಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಸಂಶೋಧನಾ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.
ಆಕ್ಸ್ಫರ್ಡ್ ವಿವಿಯ ಜೆನ್ನರ್ ಇನ್ಸ್ಟಿಟ್ಯೂಟ್ ಈ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಇದರ ಮುಖ್ಯಸ್ಥೆ ಸಾರಾ ಗಿಲ್ಬರ್ಟ್ ಆರಂಭಿಕ ಹಂತದ ಫಲಿತಾಂಶಗಳು ತಂಡದಲ್ಲಿ ಭರವಸೆ ಮೂಡಿಸಿವೆ. ಇನ್ನೂ ಬಹಳಷ್ಟು ಕೆಲಸ ನಡೆಯಬೇಕಿದ್ದು, ಆ ಬಳಿಕವಷ್ಟೇ ಲಸಿಕೆ ಕರೊನಾ ಸಂಕಷ್ಟದಿಂದ ನಮ್ಮನ್ನು ಪಾರು ಮಾಡಲಿದೆ ಎಂದೇ ಹೇಳಬಹುದು ಎಂದು ತಿಳಿಸಿದ್ದಾರೆ.
ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯಬೇಕಿದೆ. ಅದಕ್ಕೂ ಮುನ್ನ ಹಲವು ಸಂಗತಿಗಳನ್ನು ನಾವು ಅರಿಯಬೇಕಿದೆ. ಉದಾಹರಣೆಗೆ ಕರೊನಾ ವೈರಸ್ ಮಣಿಸಲು ಎಷ್ಟು ಪ್ರಮಾಣಲ್ಲಿ ನಮ್ಮ ದೇಹ ಪ್ರತಿರೋಧಕ ಶಕ್ತಿಯನ್ನು ಹೊಂದಿರ ಬೇಕಾಗತ್ತದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಈ ಲಸಿಕೆ ಪರಿಣಾಮಕಾರಿಯಾಗಿದ್ದರೆ, ಇದನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಿದೆ ಎಂದು ಸಾರಾ ಹೇಳಿದ್ದಾರೆ.
ಈ ಲಸಿಕೆ ಯಶಸ್ವಿಯಾದಲ್ಲಿ ಕರೊನಾ ಸೋಂಕು ತಡೆಗಟ್ಟಲು, ಕೋವಿಡ್ಗೆ ಚಿಕಿತ್ಸೆ ನೀಡಲು, ಮರಣವನ್ನು ತಪ್ಪಿಸಲು ಬಳಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಒಟ್ಟಿನಲ್ಲಿ ಆಕ್ಸ್ಫರ್ಡ್ ವಿವಿ ಲಸಿಕೆ ಉಳಿದೆಲ್ಲ ಸಂಶೋಧನೆಗಳಿಗಿಂತ ಮುಂದಿದ್ದು, ಆರಂಭಿಕ ಯಶಸ್ಸಿನಿಂದಾಗಿ ಭಾರಿ ಭರವಸೆ ಮೂಡಿಸಿದೆ.