

ನ್ಯೂಯಾರ್ಕ್: ಖಾಲಿ ಕ್ರೀಡಾಂಗಣದ ನೀರವ ಮೌನ, ಸ್ಟಾರ್ ಆಟಗಾರರ ಅದ್ಬುತ ರಿಟರ್ನ್ ಶಾಟ್, ಏಸ್ಗಳಿಗೂ ಚಪ್ಪಾಳೆ ಇಲ್ಲದ ನಿಶಬ್ದ ವಾತಾವರಣದಲ್ಲಿ ನಡೆದ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮೊದಲ ದಿನದಾಟದಲ್ಲಿ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್, 4ನೇ ಶ್ರೇಯಾಂಕಿತ ಗ್ರೀಸ್ನ ಸ್ಟೆಾನೋಸ್ ಸಿಸಿಪಾಸ್, 5ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್, ಮಹಿಳಾ ಸಿಂಗಲ್ಸ್ನಲ್ಲಿ ಮಾಜಿ ಚಾಂಪಿಯನ್ ನವೊಮಿ ಒಸಾಕಾ, 6ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಗೆಲುವಿನ ಆರಂಭ ಪಡೆದರು. ಆತಿಥೇಯ ಅಮೆರಿಕದ ಆಶಾಕಿರಣ ಕೋಕೋ ಗೌಫ್ ಮೊದಲ ದಿನ ಆಘಾತ ಎದುರಿಸಿದ ಪ್ರಮುಖ ತಾರೆಯಾಗಿದ್ದಾರೆ.
ಕರೊನಾ ಹಾವಳಿಯ ನಡುವೆ ನವವಾಸ್ತವದ ನಿಯಮಾವಳಿಗಳೊಂದಿಗೆ 7 ತಿಂಗಳ ಅಂತರದ ಬಳಿಕ ನಡೆಯುತ್ತಿರುವ ಗ್ರಾಂಡ್ ಸ್ಲಾಂ ಟೂರ್ನಿ ಇದಾಗಿದೆ. ಈ ವರ್ಷದ ಅಜೇಯ ಓಟವನ್ನು 24ನೇ ಪಂದ್ಯಕ್ಕೂ ವಿಸ್ತರಿಸಿದ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ ಮೊದಲ ಸುತ್ತಿನಲ್ಲಿ ಬೋಸ್ನಿಯಾದ ಡಮಿರ್ ಜುಮ್ಹರ್ ವಿರುದ್ಧ 6-1, 6-4, 6-1ರಿಂದ ಸುಲಭ ಗೆಲುವು ದಾಖಲಿಸಿದರು. ಈ ಮೂಲಕ 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸುವ ಅಭಿಯಾನವನ್ನು ಶುಭಾರಂಭ ಮಾಡಿದ್ದಾರೆ.
ಜ್ವೆರೇವ್ 7-6, 5-7, 6-3, 7-5ರಿಂದ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ವಿರುದ್ಧ ಜಯಿಸಿದರೆ, ಸಿಸಿಪಾಸ್ 6-2, 6-1, 6-1 ನೇರಸೆಟ್ಗಳಿಂದ ಸ್ಪೇನ್ನ ರಾಮೋಸ್ ವಿನೊಲಸ್ರನ್ನು ಮಣಿಸಿ 2ನೇ ಸುತ್ತಿಗೇರಿದರು. ಕ್ರೊವೇಷಿಯಾದ ಬೋಸ್ನಾ ಕೊರಿಕ್, ಕೆನಡದ ಡೆನಿಸ್ ಶಪೊವಲೋವ್ 2ನೇ ಸುತ್ತಿಗೇರಿದ ಇತರ ಪ್ರಮುಖರು.
ಒಸಾಕಾ ವಿಶೇಷ ಮಾಸ್ಕ್
ಜಪಾನ್ ತಾರೆ ನವೊಮಿ ಒಸಾಕಾ ಯುಎಸ್ ಓಪನ್ನಲ್ಲೂ ಜನಾಂಗೀಯ ಸಮಾನತೆಗಾಗಿ ಹೋರಾಟ ಮುಂದುವರಿಸಿದ್ದಾರೆ. ಪೊಲೀಸರಿಂದ ಶೂಟೌಟ್ಗೆ ಬಲಿಯಾಗಿದ್ದ ಆಫ್ರಿಕನ್-ಅಮೆರಿಕನ್ ಬ್ರೆಯೊನ್ನಾ ಟೇಲರ್ ಹೆಸರಿನ ಮಾಸ್ಕ್ ಧರಿಸಿ ಕೋರ್ಟ್ಗೆ ಆಗಮಿಸಿದ 22 ವರ್ಷದ ಒಸಾಕಾ, ಮೊದಲ ಸುತ್ತಿನಲ್ಲಿ ದೇಶಬಾಂಧವೆ ಮಿಸಕಿ ಡೊಯಿ ವಿರುದ್ಧ 6-2, 5-7, 6-2 ಸೆಟ್ಗಳಿಂದ ಜಯಿಸಿದರು. ಜನಾಂಗೀಯ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವುದೇ ತಮ್ಮ ಉದ್ದೇಶ ಎಂದು ಒಸಾಕಾ ವಿಶೇಷ ಮಾಸ್ಕ್ನ ಬಗ್ಗೆ ಹೇಳಿದರು. ಈ ಮುನ್ನ ಜೇಕಬ್ ಬ್ಲೇಕ್ ಮೇಲಿನ ಗುಂಡಿನ ದಾಳಿ ಪ್ರತಿಭಟಿಸಿ ಅವರು ವೆಸ್ಟರ್ನ್-ಸದರ್ನ್ ಓಪನ್ನ ಸೆಮೀಸ್ ತ್ಯಜಿಸಲು ಮುಂದಾಗಿದ್ದರು.
ಪೆಟ್ರಾ ಕ್ವಿಟೋವಾಗೆ ಜಯ
ಟೂರ್ನಿಯಲ್ಲಿ ಆಡುತ್ತಿರುವ ಕೆಲವೇ ಕೆಲವು ಗ್ರಾಂಡ್ ಸ್ಲಾಂ ಚಾಂಪಿಯನ್ಗಳಲ್ಲಿ ಒಬ್ಬರಾಗಿರುವ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ರೊಮೇನಿಯಾದ ಇರಿನಾ ಕ್ಯಾಮೆಲಿಯಾ ವಿರುದ್ಧ 6-3, 6-2 ನೇರಸೆಟ್ಗಳಿಂದ ಜಯಿಸಿದರು. ಭಾರತದ ಮಾಜಿ ಡೇವಿಸ್ ಕಪ್ ಆಟಗಾರ ಆನಂದ್ ಅಮೃತ್ರಾಜ್ ಸೊಸೆ ಹಾಗೂ ಮಾಜಿ ಆಟಗಾರ ಸ್ಟೀನ್ ಅಮೃತ್ರಾಜ್ ಪತ್ನಿ ಅಮೆರಿಕದ ಆಲಿಸನ್ ರಿಸ್ಕೆ ಮೊದಲ ಸುತ್ತಿನಲ್ಲಿ ಜರ್ಮನಿಯ ಟಜನಾ ಮರಿಯಾಗೆ 6-3, 6-2ರಿಂದ ಸೋಲುಣಿಸಿದರು. ಇಸ್ಟೋನಿಯಾದ ಅನೆಟ್ ಕೊಂಟಾವೆಲ್ಟ್, ಇಟಲಿಯ ಕ್ಯಾಮಿಲ ಜಿಯೋರ್ಜಿ 2ನೇ ಸುತ್ತಿಗೇರಿದ ಇತರ ಪ್ರಮುಖ ಆಟಗಾರ್ತಿಯರು.
ಕೋಕೋ ಗೌಫ್ಗೆ ಶಾಕ್
16 ವರ್ಷದ ಆಟಗಾರ್ತಿ ಕೋಕೋ ಗೌಫ್ ಆತಿಥೇಯರ ನಿರೀಕ್ಷೆಯನ್ನು ಮೊದಲ ಸುತ್ತಿನಲ್ಲೇ ಸುಳ್ಳಾಗಿಸಿದರು. ಪ್ರೇಕ್ಷಕರ ಬೆಂಬಲವಿಲ್ಲದೆ, ತವರಿನ ಲಾಭವನ್ನೇ ಮಿಸ್ ಮಾಡಿಕೊಂಡ ಗೌಫ್, ಮೊದಲ ಸುತ್ತಿನ ಪಂದ್ಯದಲ್ಲಿ ಲಾತ್ವಿಯಾದ ಅನಾಸ್ತಸಿಜಾ ಸೆವಸ್ತೋವಾ ವಿರುದ್ಧ 3-6, 7-5, 4-6ರಿಂದ ಸೋಲು ಕಂಡರು. ಗೌಫ್ ಇದುವರೆಗೆ ಆಡಿದ 4 ಗ್ರಾಂಡ್ ಸ್ಲಾಂಗಳಲ್ಲಿ ಇದುವೇ ಅತಿಬೇಗದ ನಿರ್ಗಮನವಾಗಿದೆ. ಕಳೆದ ವರ್ಷದ ಟೂರ್ನಿಯಲ್ಲಿ ಅವರು 3ನೇ ಸುತ್ತಿಗೇರಿ ಗಮನಸೆಳೆದಿದ್ದರು. 16ನೇ ಶ್ರೇಯಾಂಕಿತ ಅಮೆರಿಕದ ಜಾನ್ ಐಸ್ನರ್ ದೇಶಬಾಂಧವ ಸ್ಟೀವ್ ಜಾನ್ಸನ್ ವಿರುದ್ಧ 5 ಸೆಟ್ಗಳ ಹೋರಾಟದಲ್ಲಿ ಸೋಲು ಕಂಡಿದ್ದು, ಆತಿಥೇಯರಿಗೆ ಎದುರಾದ ದಿನದ ಮತ್ತೊಂದು ಆಘಾತವಾಗಿದೆ.