More

    VIDEO | ಶ್ರೀಶಾಂತ್​ ನಿಷೇಧ ಮುಕ್ತಾಯಕ್ಕೆ ದಿನಗಣನೆ, ಬೌಲಿಂಗ್​ ಅಭ್ಯಾಸ ಆರಂಭ

    ಕೊಚ್ಚಿ: ಐಪಿಎಲ್​ ಸ್ಪಾಟ್​ ಫಿಕ್ಸಿಂಗ್​ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಭಾರತ ತಂಡದ ಮಾಜಿ ವೇಗದ ಬೌಲರ್​ ಎಸ್​. ಶ್ರೀಶಾಂತ್​ ಅವರ ನಿಷೇಧ ಮುಕ್ತಾಯಕ್ಕೆ ದಿನಗಣನೆ ಆರಂಭಗೊಂಡಿದೆ. ಸೆಪ್ಟೆಂಬರ್​ 13ರಂದು ಶ್ರೀಶಾಂತ್​ ಅವರ ನಿಷೇಧ ಮುಗಿಯಲಿದ್ದು, ಮರಳಿ ಕಣಕ್ಕಿಳಿಯುವ ಧ್ಯೇಯದೊಂದಿಗೆ ಅವರು ಈಗಾಗಲೆ ಬೌಲಿಂಗ್​ ಅಭ್ಯಾಸವನ್ನು ಆರಂಭಿಸಿದ್ದಾರೆ.

    2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ವಿಜೇತ ತಂಡಗಳ ಭಾಗವಾಗಿದ್ದ ಶ್ರೀಶಾಂತ್​, ಕರೊನಾ ವೈರಸ್​ನಿಂದ ಕೆಲಕಾಲ ಪಡೆದಿದ್ದ ಪಡೆದಿದ್ದ ಬಿಡುವಿನ ಬಳಿಕ ಕೇರಳದ ಕ್ರಿಕೆಟ್​ ಕ್ಲಬ್​ ಒಂದರ ನೆಟ್ಸ್​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

    37 ವರ್ಷದ ಶ್ರೀಶಾಂತ್​ ಮುಂಬರುವ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕೇರಳ ಪರ ರಣಜಿ ಟ್ರೋಫಿಯಲ್ಲಿ ಆಡುವ ಹಂಬಲವನ್ನೂ ಹೊಂದಿದ್ದು, ಮುಂದಿನ ವರ್ಷದ ಐಪಿಎಲ್​ನಲ್ಲಿ ಕಣಕ್ಕಿಳಿಯುವ ಯೋಜನೆಯನ್ನೂ ಹೊಂದಿದ್ದಾರೆ. ಶ್ರೀಶಾಂತ್​ ಫಿಟ್ನೆಸ್​ ಮತ್ತು ಫಾರ್ಮ್​ ಸಾಬೀತು ಪಡಿಸಿದರೆ ಆಡುವ ಅವಕಾಶ ನೀಡಲಾಗುವುದು ಎಂದು ಕೇರಳ ರಣಜಿ ತಂಡದ ಕೋಚ್​ ಟಿನು ಯಹೋನನ್​ ಈಗಾಗಲೆ ಘೋಷಿಸಿದ್ದಾರೆ.

    ಇದನ್ನೂ ಓದಿ: VIDEO | ಕನ್ನಡಿಗ ಜಾವಗಲ್​ ಶ್ರೀನಾಥ್​ ಬರ್ತ್​ಡೇಗೆ ವಿಶೇಷ ವಿಡಿಯೋ ಹಂಚಿಕೊಂಡ ಯುವರಾಜ್​ ಸಿಂಗ್​

    ‘ನೆಟ್ಸ್​ಗೆ ಮರಳಿರುವೆ. ಇದು ನಿಜಕ್ಕೂ ಅತ್ಯುತ್ತಮ ಅನುಭವ. ಸ್ಪೈಕ್ಸ್​ ಧರಿಸಿ ಓಡುವುದೇ ಖುಷಿ’ ಎಂದು ಶ್ರೀಶಾಂತ್​ ಬೌಲಿಂಗ್​ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಸ್ವಿಂಗ್​ ಬೌಲಿಂಗ್​ ಲಯ ಇನ್ನೂ ಉಳಿದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

    2013ರ ಐಪಿಎಲ್​ ಸ್ಪಾಟ್ ಫಿಕ್ಸಿಂಗ್​ ಪ್ರಕರಣದಲ್ಲಿ ಮೊದಲಿಗೆ ಶ್ರೀಶಾಂತ್​ ಅವರಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್​ ಮೊರೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿಸಿಕೊಂಡಿದ್ದರು. 2019ರ ಆಗಸ್ಟ್​ನಲ್ಲಿ ಬಿಸಿಸಿಐ ಅವರ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿತ್ತು. ಶ್ರೀಶಾಂತ್​ ಭಾರತ ತಂಡದ ಪರ 27 ಟೆಸ್ಟ್​, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್​ ಕಬಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts