

ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಅತ್ಯುತ್ತಮ ವೇಗಿಗಳಲ್ಲಿ ಪ್ರಮುಖರಾದ ಜಾವಗಲ್ ಶ್ರೀನಾಥ್ ಅವರಿಗೆ ಸೋಮವಾರ 51ನೇ ಜನ್ಮದಿನದ ಸಂಭ್ರಮ. ಇದೇ ವೇಳೆ ಕ್ರಿಕೆಟ್ ವಲಯ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಹರಿದಿದೆ. ಈ ನಡುವೆ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ಮಾಜಿ ಸಹ-ಆಟಗಾರ ಹಾಗೂ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.
ಶ್ರೀನಾಥ್ ಅವರು 2003ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರೂ, 2017ರಲ್ಲೂ ಅವರು ಟೀಮ್ ಇಂಡಿಯಾದ ಅಭ್ಯಾಸದ ಜೆರ್ಸಿ ಧರಿಸಿಯೇ ಟ್ರೆಡ್ಮಿಲ್ನಲ್ಲಿ ಓಡುವ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳಲು ಗಮನ ಹರಿಸಿರುವ ವಿಡಿಯೋವನ್ನು ಯುವರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಜತೆಗೆ ಟೀಮ್ ಇಂಡಿಯಾ ಪರ ಅವರ ಬದ್ಧತೆಯನ್ನು ಪ್ರಶಂಸಿಸಿದ್ದಾರೆ.
'ಟೀಮ್ ಇಂಡಿಯಾ ಪರ ನಿಮಗಿರುವ ಪ್ರೀತಿಯನ್ನು ತೋರಿಸುವ ಸಲುವಾಗಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಭಾರತೀಯ ಕ್ರಿಕೆಟ್ನ ದಿಗ್ಗಜರಲ್ಲಿ ಇವರೂ ಒಬ್ಬರು. ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದು ನನ್ನ ಭಾಗ್ಯ. ಹ್ಯಾಪಿ ಬರ್ತ್ಡೇ ಶ್ರೀನಾಥ್. ನಿಮ್ಮ ಈ ವಿಡಿಯೋವನ್ನು ನೋಡಿ ಮಾಜಿ ಸಹ-ಆಟಗಾರರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ಹರ್ಭಜನ್ ಸಿಂಗ್ ಖುಷಿ ಪಡುವರು' ಎಂದು ಯುವರಾಜ್ ಸಿಂಗ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ಟೂರ್ನಿಗೆ ಆರ್ಸಿಬಿ ತಂಡದ ಹೊಸ ಜೆರ್ಸಿ ಅನಾವರಣ
ಯುವರಾಜ್ ಸಿಂಗ್ ಅವರ ವಿಡಿಯೋಗೆ ಕರ್ನಾಟಕದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಕಮೆಂಟ್ ಹಾಕಿದ್ದು, 'ಈ ವಿಡಿಯೋವನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು ಯುವರಾಜ್. ಶ್ರೀನಾಥ್ ಟ್ರೇನಿಂಗ್ನಲ್ಲಿರುವುದನ್ನು ನೋಡಿದರೆ ಸಕ್ರಿಯ ಕ್ರಿಕೆಟಿಗರಂತೆ ಕಾಣಿಸುತ್ತಿದ್ದಾರೆ. ಇದುವೇ ಜಾವಗಲ್ ಶ್ರೀನಾಥ್ ಅವರ ಬದ್ಧತೆ' ಎಂದು ಬರೆದುಕೊಂಡಿದ್ದಾರೆ.