More

    ರಾಮಮಂದಿರ ಉಳಿಯಬೇಕಿದ್ದರೆ ಬಿಜೆಪಿ ಗೆಲ್ಲಿಸಿ

    ಧಾರ್(ಮಧ್ಯಪ್ರದೇಶ): ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ರದ್ದಾದ 370ನೇ ವಿಧಿಯನ್ನು ಕಾಂಗ್ರೆಸ್ ಮರುಸ್ಥಾಪನೆ ಮಾಡುವ ಲೆಕ್ಕಾಚಾರದಲ್ಲಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ 400 ಸೀಟುಗಳನ್ನು ಗೆಲ್ಲಬೇಕಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ಬೀಗ ಹಾಕದಂತೆ ನೋಡಿಕೊಳ್ಳಲೂ ಇದು ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಮಧ್ಯಪ್ರದೇಶದ ಧಾರ್​ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ ಅವರು, ಸಂಸತ್ತಿನಲ್ಲಿ ನಮಗೆ ಈಗಾಗಲೇ 400ಕ್ಕಿಂತಲೂ ಹೆಚ್ಚು ಸ್ಥಾನಗಳಿವೆ ಎಂಬುದನ್ನು ಜನ ತಿಳಿದುಕೊಳ್ಳುವುದು ಮುಖ್ಯ. ಇದನ್ನು ನಾವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಬಳಸಿಕೊಂಡೆವು. ಆದರೆ, ಕಾಂಗ್ರೆಸ್​ಗೆ ಉದ್ದೇಶ ಬೇರೆಯದೇ ಇದೆ. ನಾವು 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂಬ ಸುಳ್ಳು ವದಂತಿಗಳನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ವಾಸ್ತವದಲ್ಲಿ, ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್​ರನ್ನು ಕಾಂಗ್ರೆಸ್ ತೀವ್ರವಾಗಿ ದ್ವೇಷಿಸುತ್ತದೆ. ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಬಹಳ ಕಡಿಮೆ ಎಂದು ಹೇಳಲು ಶುರು ಮಾಡಿದೆ ಎಂದು ಆರೋಪಿಸಿದರು.

    ದೇಶದ 140 ಕೋಟಿ ಜನರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಿಲ್ಲ. ಎಸ್​ಸಿ, ಎಸ್​ಟಿ ಮತ್ತು ಒಬಿಸಿಗೆ ನೀಡುತ್ತಿರುವ ಮೀಸಲಾತಿಯನ್ನು ಎಂದಿಗೂ ಕಸಿದುಕೊಳ್ಳುವುದಿಲ್ಲ ಮತ್ತು ಈಗಿರುವ ಒಬಿಸಿ ಕೋಟಾದಿಂದ ದರೋಡೆ ಮಾಡಿ ಮುಸ್ಲಿಮರಿಗೆ ಎಂದಿಗೂ ಮೀಸಲಾತಿ ನೀಡುವುದಿಲ್ಲ ಎಂಬ ಲಿಖಿತ ಭರವಸೆ ನೀಡುವಂತೆ ಕಾಂಗ್ರೆಸ್​ಗೆ ಹೇಳಿದ್ದೆ. ಆದರೆ ಅವರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.

    ನಾವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪಡೆದ ಬಹುಮತವನ್ನು 10 ವರ್ಷಗಳ ಕಾಲ ಎಸ್​ಸಿ/ಎಸ್​ಟಿ ಕೋಟಾ ವಿಸ್ತರಿಸಲು, ಬುಡಕಟ್ಟು ಮಹಿಳೆಯರನ್ನು ದೇಶದ ರಾಷ್ಟ್ರಪತಿಯಾಗಿ ನೇಮಿಸಲು ಮತ್ತು ಮಹಿಳೆಯರಿಗೆ ಮೀಸಲಾತಿ ಒದಗಿಸಲು ಬಳಸಿದ್ದೇವೆ ಎಂದು ಪ್ರಧಾನಿ ಸಮರ್ಥಿಸಿಕೊಂಡರು. ಕಾಂಗ್ರೆಸ್ ದೇಶದ ಖಾಲಿ ಭೂಮಿ ಮತ್ತು ದ್ವೀಪಗಳನ್ನು ಬೇರೆ ದೇಶಗಳಿಗೆ ಹಸ್ತಾಂತರಿಸದಂತೆ ನೋಡಿಕೊಳ್ಳಲು ಮೋದಿ 400 ಸ್ಥಾನಗಳನ್ನು ಕೇಳುತ್ತಿದ್ದಾರೆ. ಮೋದಿ ಬದುಕಿರುವವರೆಗೂ, ನಕಲಿ ಮತ್ತು ಹುಸಿ ಜಾತ್ಯತೀತತೆಯ ಹೆಸರಿನಲ್ಲಿ ಭಾರತದ ಗುರುತನ್ನು ಅಳಿಸುವ ಪ್ರಯತ್ನಗಳನ್ನು ವಿಫಲಗೊಳಿಸುತ್ತಾರೆ. ರಾಜವಂಶದವರು ಮೊದಲು ದೇಶದ ಇತಿಹಾಸವನ್ನು ತಿರುಚಿದರು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಮಹಾನ್ ಪುತ್ರ ಜನರು ಮರೆಯುವಂತೆ ಮಾಡಿದರು ಎಂದು ಮೋದಿ ಹೇಳಿದರು.

    ಲಾಲು ವಿರುದ್ಧ ಕಿಡಿ: ಆರ್​ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮುಸ್ಲಿಮರಿಗೆ ಮೀಸಲಾತಿ ಪ್ರಯೋಜನಗಳನ್ನು ನೀಡುವ ಕುರಿತು ಕೊಟ್ಟ ಹೇಳಿಕೆಗಳನ್ನು ಖಂಡಿಸಿದ ಪ್ರಧಾನಿ ಮೋದಿ, ಇಂಡಿಯಾ ಮೈತ್ರಿಕೂಟ ಎಸ್​ಸಿ/ಎಸ್​ಟಿ, ಒಬಿಸಿಗಳ ಮೀಸಲಾತಿ ತಮ್ಮ ವೋಟ್ ಬ್ಯಾಂಕ್​ಗೆ ನೀಡಲು ಬಯಸಿದೆ. ಇದರ ಹಿಂದೆ ಆಳವಾದ ಪಿತೂರಿಯಿದೆ ಎಂದು ಹೇಳಿದ್ದಾರೆ. ಪ್ರಾಣಿಗಳ ಮೇವನ್ನು ತಿಂದು ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಆರ್​ಜೆಡಿ ನಾಯಕ, ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದಲೂ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ, ಆರೋಗ್ಯದ ಕಾರಣದಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಎಲ್ಲ ಮೀಸಲಾತಿಯನ್ನೂ ಮುಸ್ಲಿಮರಿಗೆ ನೀಡಬೇಕು ಎನ್ನುತ್ತಿದ್ದಾರೆ. ಕಳೆದ ಹಲವಾರು ದಿನಗಳಿಂದ ನಾನು ಅವರ ಬಗ್ಗೆ ಒಂದೇ ಮಾತನ್ನು ಹೇಳುತ್ತಿದ್ದೇನೆ. ಮೀಸಲಾತಿಯಲ್ಲಿ ಒಂದಷ್ಟು ಭಾಗ ಕಡಿತಗೊಳಿಸಿ ಧರ್ಮದ ಆಧಾರದಲ್ಲಿ ಕೊಡಲು ಮುಂದಾಗಿದ್ದಾರೆ ಎಂದು ಪಿಎಂ ಆರೋಪಿಸಿದ್ದಾರೆ.

    ವೋಟ್ ಜಿಹಾದ್ VS ರಾಮರಾಜ್ಯ : ಭಾರತ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಇದಾಗಿದೆ. ಭಾರತದ ಮುಂದಿರುವ ಮಾರ್ಗ ವೋಟ್ ಜಿಹಾದ್ ಅಥವಾ ರಾಮ ರಾಜ್ಯವೇ ಎಂಬುದನ್ನು ಜನರು ನಿರ್ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಮಧ್ಯಪ್ರದೇಶದ ಖಾಗೋನ್ ಜಿಲ್ಲೆಯ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಉದ್ದೇಶ ತುಂಬಾ ಅಪಾಯಕಾರಿ. ಅವರು ವೋಟ್ ಜಿಹಾದ್​ಗೆ ಕರೆ ನೀಡಿದ್ದಾರೆ ಎಂದು ಎಚ್ಚರಿಸಿದ್ದಾರೆ. ವಾರದ ಹಿಂದೆ ಚುನಾವಣಾ ರಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ, ಸಮಾಜವಾದಿ ಪಕ್ಷದ (ಎಸ್​ಪಿ) ನಾಯಕಿ ಮಾರಿಯಾ ಆಲಂ ಫರೂಕಾಬಾದ್ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನವಲ್ ಕಿಶೋರ್ ಶಾಕ್ಯಾ ಪರ ಮತ ಯಾಚಿಸುತ್ತಾ, ವೋಟ್ ಜಿಹಾದ್ ಮತ ನೀಡಿ ಎಂದು ಕರೆ ಕೊಟ್ಟಿದ್ದರು. ಇಂಡಿಯಾ ಮೈತ್ರಿಕೂಟದ ಪಾಲುದಾರರು ಜನಸಾಮಾನ್ಯರ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ರಾಜವಂಶವನ್ನು ಉಳಿಸಲು ಚುನಾವಣೆಗಳಲ್ಲಿ ಹೋರಾಡುತ್ತಿದ್ದಾರೆ. ವೋಟ್ ಜಿಹಾದ್​ನಂತಹ ಪರಿಕಲ್ಪನೆ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವೇ? ಪಾಕಿಸ್ತಾನದ ಭಯೋತ್ಪಾದಕರು ಭಾರತದ ವಿರುದ್ಧ ಜಿಹಾದ್​ನ ಬೆದರಿಕೆ ಒಡ್ಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್​ನಲ್ಲಿರುವವರೂ ಮೋದಿ ವಿರುದ್ಧ ವೋಟ್ ಜಿಹಾದ್ ಮಾಡುವುದಾಗಿ ಘೊಷಿಸಿದ್ದಾರೆ. ಅಂದರೆ ನಿರ್ದಿಷ್ಟ ಧರ್ಮದ ಜನರು ಮೋದಿ ವಿರುದ್ಧ ಒಗ್ಗಟ್ಟಾಗಿ ಮತ ಚಲಾಯಿಸುವಂತೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಯಾವ ಮಟ್ಟದಲ್ಲಿದೆ ಎಂದು ಊಹಿಸಿ ಎಂದು ಕಿಡಿಕಾರಿದರು.

    ಆದಿವಾಸಿಗಳ ಅಭಿವೃದ್ಧಿ ಬಿಜೆಪಿಗೆ ಬೇಕಿಲ್ಲ : ಚೈಬಾಸಾ: ಆದಿವಾಸಿಗಳಿಗೆ ಸೇರಿದ ಜಲ, ಜಂಗಲ್, ಜಮೀನುಗಳನ್ನು (ನೀರು, ಅರಣ್ಯ, ಭೂಮಿ) ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಜಾರ್ಖಂಡ್​ನ ಚೈಬಾಸಾದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಟ್ಯಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಿದೆ. ಈ ಲೋಕಸಭಾ ಚುನಾವಣೆ ಸಂವಿಧಾನ ಮತ್ತು ಆದಿವಾಸಿಗಳು, ಬಡವರು ಮತ್ತು ಹಿಂದುಳಿದವರ ಹಕ್ಕುಗಳನ್ನು ಉಳಿಸುವುದಕ್ಕಾಗಿ ನಡೆಯುತ್ತಿದೆ. ಇಂಡಿಯಾ ಮೈತ್ರಿಕೂಟದ ನಾಯಕರು ಸಂವಿಧಾನವನ್ನು ಉಳಿಸಲು ತಮ್ಮ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಹೇಳಿದ್ದಾರೆ. 15 ಕೈಗಾರಿಕೋದ್ಯಮಿಗಳಿಗೆ ಆದಿವಾಸಿಗಳ ನೀರು, ಅರಣ್ಯ, ಭೂಮಿಗಳನ್ನು ಪ್ರಧಾನಿ ಹಸ್ತಾಂತರಿಸುವ ಉದ್ದೇಶ ಹೊಂದಿದ್ದಾರೆ. ಮೋದಿಯವರು ಅದಾನಿ, ಅಂಬಾನಿಗಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ 10 ವರ್ಷಗಳಲ್ಲಿ 22 ಜನರನ್ನು ಬಿಲಿಯನೇರ್​ಗಳನ್ನಾಗಿ ಅವರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ಆದಿವಾಸಿಗಳನ್ನು ಮನೆ ಕೆಲಸದ ಕಾರ್ಯಗಳಿಗೆ ಸೀಮಿತಗೊಳಿಸಲು ಬಯಸುತ್ತದೆ. ನೀವು ಎಂದಿಗೂ ವೈದ್ಯರು, ಎಂಜಿನಿಯರ್​ಗಳು ಮತ್ತು ವಕೀಲರಾಗಲು ಅವರು ಬಯಸುವುದಿಲ್ಲ. ಅವರು ಕಾಡಾನೆಗಳನ್ನು ಕೈಗಾರಿಕೋದ್ಯಮಿಗಳಿಗೆ ಒಪ್ಪಿಸಲು ಇಚ್ಛಿಸುತ್ತಾರೆ ಎಂದು ಕಿಡಿಕಾರಿದರು.

    ಬೆಂಗಳೂರಿನಲ್ಲಿ ಲಾಂಗ್‌ನಿಂದ ಹೊಡೆದು ರೌಡಿಶೀಟರ್ ಬರ್ಬರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts