ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಲು ಕಾಂಗ್ರೆಸ್‌ನಲ್ಲಿ ದಿನದಿನದಕ್ಕೂ ಪೈಪೋಟಿ ಹೆಚ್ಚಾಗಲಾರಂಭವಾಗಿದೆ. ಜೂನ್ ಮಧ್ಯದಲ್ಲಿ ವಿಧಾನಪರಿಷತ್‌ನ 11 ಸ್ಥಾನ ಖಾಲಿಯಾಗಲಿದೆ, ಒಂದು ಸ್ಥಾನಕ್ಕೆ ಉಪ ಚುನಾವಣೆ ಹಾಗೂ ಅಕ್ಟೋಬರ್ ಕೊನೆಯಲ್ಲಿ ನಾಮನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಲು ಆಡಳಿತ ಪಕ್ಷಕ್ಕೆ ಅವಕಾಶ ಸಿಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ಆಕಾಂಕ್ಷಿಗಳು ತಮ್ಮ ನಾಯಕರ ಸುತ್ತ ಸುತ್ತುವರಿಯಲು ಆರಂಭಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆ ಪ್ರಮುಖ ನಾಯಕರೆಲ್ಲೂ ವಿಶ್ರಾಂತಿ ಮುಗಿಸಿ ಸಾರ್ವಜನಿಕರ ಭೇಟಿಗೆ ಲಭ್ಯರಾಗುತ್ತಿದೆ. ಸರ್ಕಾರದಲ್ಲಿ ಅನೌಪಚಾರಿಕ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಅವಕಾಶ ಬಳಸಿಕೊಂಡ ಕಾಂಗ್ರೆಸ್ ಹಿರಿ-ಕಿರಿ ನಾಯಕರು ತಮಗೆ ಪರಿಷತ್‌ನಲ್ಲಿ ಅವಕಾಶ ಕೊಡುವಂತೆ ಮನವಿ ಸಲ್ಲಿಸಲಾರಂಭಿಸಿದ್ದಾರೆ.
ಸಚಿವರು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಸಾಧನಾ ವರದಿಯನ್ನು ಅವರ ಕೈಗಿಟ್ಟು ವಿಧಾನ ಪರಿಷತ್‌ನಲ್ಲಿ ಅವಕಾಶ ನೀಡುವಂತೆ ಕೋರಿಕೆ ಇಡುತ್ತಿದ್ದಾರೆ.
ಆಕಾಂಕ್ಷಿಗಳು ನಾಯಕರ ಮನೆ ಬಾಗಿಲಿಗೆ ಅಲೆದಾಡುತ್ತಿದ್ದಾರೆ ಹಾಗೆಯೇ ಕಳೆದ ಎರಡು ದಿನ ಸಿಎಂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಹಲವು ಆಕಾಂಕ್ಷಿಗಳು ದಾಂಗುಡಿ ಇಟ್ಟಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈಗೂ ಅನೇಕರು ತಮ್ಮ ಬಯೋಡೇಟಾ ಕೈಗಿಟ್ಟಿದ್ದಾರೆ. ಒಟ್ಟಾರೆ. ನಾಯಕರು ಹೋದಲ್ಲಿ ಬಂದಲ್ಲಿ ಬಗಲಲ್ಲಿ ಫೈಲ್ ಹಿಡಿದು ಅಲೆಯುತ್ತಿರುವ ಆಕಾಂಕ್ಷಿಗಳು ಕಾಣಸಿಗುತ್ತಿದ್ದಾರೆ.
ಕಿರಿಯರ ಪೈಪೋಟಿ
ವಿವಿಧ ಕಾರಣದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಇರುವುದು ಅಥವಾ ಕ್ಷೇತ್ರ ತ್ಯಾಗ ಮಾಡಿದ್ದರಿಂದಲೋ, ಚುನಾವಣೆಯಲ್ಲಿ ಸೋತ ಕಾರಣಕ್ಕೆ ಮೂಲೆಗುಂಪಾದವರು ತಮ್ಮ ರಾಜಕೀಯ ಮರುಹುಟ್ಟು ಪಡೆದುಕೊಳ್ಳಲು ಪರಿಷತ್ ಸದಸ್ಯರಾಗುವ ಇರಾದೆ ಹೊಂದಿದ್ದಾರೆ. ಏಳೆಂಟು ಮಾಜಿ ಸಚಿವರೂ ಸಹ ಈ ವರ್ಗಕ್ಕೆ ಸೇರಿದವರಿದ್ದಾರೆ. ಹಾಗೆಯೇ ಪಕ್ಷದಲ್ಲಿ ಹಲವಾರು ವರ್ಷಗಳಿಂದ ದುಡಿದು ಹೆಚ್ಚಿನ ಅವಕಾಶ ಸಿಗದೇ ಇರುವವರೂ ಸಹ ಒಂದು ಕೈ ನೋಡೋಣ ಎಂದು ಅಖಾಡಕ್ಕಿಳಿದಿದ್ದಾರೆ.
ಇವರಿಗೆ ಎದುರಾಗಿ ಕಿರಿಯರು ಪರಿಷತ್ ಪ್ರವೇಶಿಸಲು ಪೈಪೋಟಿ ಆರಂಭಿಸಿದ್ದಾರೆ. ಪಕ್ಷ ಸಂಘಟಿಸಿದ್ದೇವೆ, ಚುನಾವಣೆಗೆ ಕೆಲಸ ಮಾಡಿದ್ದೇವೆ, ತೆರೆ ಹಿಂದೆ ಶ್ರಮಹಾಕಿದ್ದೇವೆ, ನಮಗೂ ಅವಕಾಶ ಕೊಡಿ ಎಂದು ಬೇಡಿಕೆ ಮುಂದಿಡಲು ಆರಂಭಿಸಿದ್ದಾರೆ.
ಈ ಮಧ್ಯೆ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹತ್ತು ಹಲವು ಮಂದಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಟಿಕೆಟ್ ಹಂಚಿಕೆ ವೇಳೆ ಪೈಪೋಟಿ ಏರ್ಪಟ್ಟ ಸಂದರ್ಭದಲ್ಲಿ ಈ ಅವಕಾಶದ ಆಮೀಷ ಇಟ್ಟಿದ್ದರು. ಇದೀಗ ಅಂತವರೆಲ್ಲರೂ ಕೂಡ ತಮಗೆ ವರ್ಷದ ಹಿಂದೆ ನೀಡಿದ್ದ ಭರವಸೆಯನ್ನು ನೆನಪಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
