

ನವದೆಹಲಿ: ಐಪಿಎಲ್ ಟೂರ್ನಿಯನ್ನು ಈ ಬಾರಿ ವಿದೇಶಕ್ಕೆ ಸ್ಥಳಾಂತರ ಮಾಡಿರುವುದರಿಂದ ಬಿಸಿಸಿಐ ಹೆಚ್ಚಿನ ಖರ್ಚುವೆಚ್ಚ ಮಾಡಬೇಕಾಗಿದೆ. ವಿಮಾನ ಪ್ರಯಾಣ, ಹೋಟೆಲ್ ಖರ್ಚುವೆಚ್ಚಗಳ ಜತೆಗೆ ಯುಎಇಯಲ್ಲಿ ಕೋವಿಡ್-19 ಪರೀಕ್ಷೆಗೂ ಬಿಸಿಸಿಐ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.
ಐಪಿಎಲ್ ಟೂರ್ನಿಯ ವೇಳೆ 20 ಸಾವಿರಕ್ಕೂ ಅಧಿಕ ಕೋವಿಡ್-19 ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಬಿಸಿಸಿಐ, ಬರೋಬ್ಬರಿ 10 ಕೋಟಿ ರೂಪಾಯಿಯನ್ನು ವ್ಯಯಿಸಲಿದೆ. ಟೂರ್ನಿಗಾಗಿ ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಭಾರತದಲ್ಲಿ ನಡೆಸಲಾದ ಕರೊನಾ ಪರೀಕ್ಷೆಗಳ ವೆಚ್ಚವನ್ನು 8 ಫ್ರಾಂಚೈಸಿಗಳೇ ಭರಿಸಿದ್ದವು. ಆದರೆ ಆಗಸ್ಟ್ 20ರಿಂದ ಯುಎಇಯಲ್ಲಿ ತಂಡಗಳ ಆಗಮನದ ಬಳಿಕ ನಡೆಸಲಾಗುತ್ತಿರುವ ಎಲ್ಲ ಆರ್‌ಟಿ-ಪಿಸಿಆರ್ ಪರೀಕ್ಷೆಗಳ ವೆಚ್ಚವನ್ನು ಬಿಸಿಸಿಐ ಭರಿಸುತ್ತಿದೆ.
‘ಯುಎಇ ಮೂಲದ ಕಂಪನಿ ವಿಪಿಎಸ್ ಹೆಲ್ತ್‌ಕೇರ್‌ಗೆ ನಾವು ಟೂರ್ನಿಯ ವೇಳೆ ಕರೊನಾ ಪರೀಕ್ಷೆ ನಡೆಸುವ ಹೊಣೆ ವಹಿಸಿದ್ದೇವೆ. ಆಟಗಾರರು, ಸಿಬ್ಬಂದಿ, ಫ್ರಾಂಚೈಸಿ ಅಧಿಕಾರಿಗಳು ಸೇರಿದಂತೆ ಒಟ್ಟು 20 ಸಾವಿರಕ್ಕೂ ಅಧಿಕ ಕರೊನಾ ಪರೀಕ್ಷೆಗಳು ನಡೆಯಲಿವೆ. ಪ್ರತಿ ಟೆಸ್ಟ್‌ಗೆ ಬಿಸಿಸಿಐ ಸುಮಾರು 4 ಸಾವಿರ ರೂ. (200 ದಿರ್‌ಹಂ) ವ್ಯಯಿಸಬೇಕಾಗಿದೆ’ ಎಂದು ಐಪಿಎಲ್ ಆಡಳಿತ ಮಂಡಳಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯ ವೇಳೆ ಕರೊನಾ ಪರೀಕ್ಷೆಗಾಗಿ ಸುಮಾರು 75 ಆರೋಗ್ಯ ಸಿಬ್ಬಂದಿ ನಿಯೋಜನೆಗೊಂಡಿರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಟೂರ್ನಿಯ ವೇಳೆ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಬಿಸಿಸಿಐ, ಪ್ರತಿ ತಂಡದ ಆಟಗಾರರು, ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಪ್ರತ್ಯೇಕ ಹೋಟೆಲ್‌ಗಳಲ್ಲಿ ಉಳಿಯುವಂತೆ ಮಾಡಿದೆ.
ಟೂರ್ನಿಗೆ ಮುನ್ನ ಆಗಸ್ಟ್ 20ರಿಂದ 28ರ ನಡುವೆ ಒಟ್ಟು 1,988 ಕೋವಿಡ್-19 ಪರೀಕ್ಷೆಗಳು ನಡೆದಿವೆ. ಈ ಪೈಕಿ ಸಿಎಸ್‌ಕೆ ತಂಡದ 13 ಸದಸ್ಯರ ವರದಿ ಮಾತ್ರ ಪಾಸಿಟಿವ್ ಬಂದಿವೆ. ಈ ಪೈಕಿ ಆಟಗಾರರಾದ ವೇಗಿ ದೀಪಕ್ ಚಹರ್ ಮತ್ತು ಭಾರತ ಎ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಕೂಡ ಸೇರಿದ್ದಾರೆ.