

ಲಾಸ್ ಏಂಜಲೀಸ್: ಪ್ರಯಾಣಿಕನೊಬ್ಬ ವಿಮಾನದ ತುರ್ತು ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ತಡೆಯಲು ಬಂದ ವಿಮಾನದ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪೊಲೀಸರ ಅತಿಥಿಯಾಗಿದ್ದಾನೆ.
ಟೊರೆಸ್ (33) ಬಂಧಿತ. ಈತನನ್ನು ಪೊಲೀಸರು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಮಾರ್ಚ್ 9 ರವರೆಗೆ ಕಸ್ಟಡಿಯಲ್ಲಿಡಲು ನ್ಯಾಯಾಲಯ ಆದೇಶಿಸಿದೆ.
ಯುನೈಟೆಡ್ ಏರ್ಲೈನ್ಸ್ ವಿಮಾನವು ಲಾಸ್ ಏಂಜಲೀಸ್ನಿಂದ ಬೋಸ್ಟನ್ಗೆ ತೆರಳುತ್ತಿತ್ತು. ಲ್ಯಾಂಡಿಂಗ್ಗೆ ಸುಮಾರು 45 ನಿಮಿಷಗಳ ಮೊದಲು, ವಿಮಾನ ಸಿಬ್ಬಂದಿಗೆ ಎಚ್ಚರಿಕೆಯ ಶಬ್ದ ಕೇಳಿಸಿದೆ, ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಂದೇಶ ಬಂದಿದೆ.
ಪ್ರಯಾಣಿಕ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಗಗನಸಖಿ ತಡೆಯಲು ಮುಂದೆ ಬಂದಿದ್ದಾಳೆ. ಈ ವೇಳೆ ಆಕೆಯ ಕತ್ತಿಗೆ ಮೂರು ಬಾರಿ ಇರಿದು ಹಲ್ಲೆ ನಡೆಸಿದ್ದಾನೆ. ಬಳಿಕ ವಿಮಾನವು ಬೋಸ್ಟನ್ನಲ್ಲಿ ಇಳಿದ ಸ್ವಲ್ಪ ಸಮಯದ ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.