

ಅಮೆರಿಕ: ಅಮೆರಿಕದ ಡೆಟ್ರಾಯಿಟ್ ಪೊಲೀಸ್ ಅಧಿಕಾರಿಯೊಬ್ಬರು ವರ್ಚುವಲ್ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ಫೋನ್ ಮೂಲಕ ಹಾಜರಾಗಿದ್ದು, ಈ ವೇಳೆ ಪ್ಯಾಂಟ್ ಧರಿಸದೆ (Pantless) ವಿಚಾರಣೆಗೆ ಕುಳಿತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಆಗುತ್ತಿರುವಂತಹ ವಿಡಿಯೋದಲ್ಲಿ ಡೆಟ್ರಾಯಿಟ್ ಪೊಲೀಸ್ ಇಲಾಖೆಯ ಅಧಿಕಾರಿ ಎಂದು ಸೂಚಿಸಲಾದ ಮ್ಯಾಥ್ಯೂ ಜಾಕ್ಸನ್ ಸೋಮವಾರ (ಅ.27) ಜೂಮ್ (ZOOM) ಆ್ಯಪ್ ಮೂಲಕ 36 ನೇ ಜಿಲ್ಲಾ ನ್ಯಾಯಾಲಯದ ಮುಂದೆ ಸಾರ್ವಜನಿಕ ಮದ್ಯಪಾನ ಮತ್ತು ಅಜಾಗರೂಕ ಚಾಲನೆಗೆ ಸಂಬಂಧಿಸಿದ ಪ್ರಕರಣಕ್ಕೆ ಹಾಜರಾಗಿದ್ದರು.
ಈ ವಿಚಾರಣೆ ಸಮಯದಲ್ಲಿ ಜಾಕ್ಸನ್ , ಕ್ಯಾಮೆರಾ ಮುಂದೆ ತನ್ನ ಸಮವಸ್ತ್ರದ ಶರ್ಟ್, ಬ್ಯಾಡ್ಜ್, ಒಳ ಉಡುಪು ಧರಿಸಿರುವುದನ್ನು ಕಾಣಬಹುದು. ಆದರೆ, ಇವರು ಪ್ಯಾಂಟ್ ಧರಿಸಿರಲಿಲ್ಲ. ಈ ವೇಳೆ ನ್ಯಾಯಾಧೀಶ ಸೀನ್ ಪರ್ಕಿನ್ಸ್ ಆ ವಿಚಿತ್ರ ನೋಟವನ್ನು ತಕ್ಷಣವೇ ಗಮನಿಸಿ, ಅಧಿಕಾರಿಗಳೇ ನೀವು ಪ್ಯಾಂಟ್ ಧರಿಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ತಕ್ಷಣವೇ ಪೊಲೀಸ್ ಅಧಿಕಾರಿ ಜೂಮ್ ಮೀಟಿಂಗ್ನಿಂದ ಹೊರ ನಡೆದಿದ್ದಾರೆ.
ಈ ದೃಶ್ಯವನ್ನು ಕಂಡಂತಹ ವಕೀಲೆಯೊಬ್ಬರು ದಿಗ್ಭ್ರಮೆಗೊಂಡ ಮುಖಭಾವದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮುಜುಗರದ ಪರಿಸ್ಥಿತಿಯ ಹೊರತಾಗಿಯೂ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರು ಮುಂದುವರೆಸಿದ್ದಾರೆ. ಈ ಸಮಯದಲ್ಲಿ ಅಧಿಕಾರಿ ಜಾಕ್ಸನ್ ಮತ್ತೆ ಜೂಮ್ ಕರೆಯಲ್ಲಿ ಕಾಣಿಸಿಕೊಂಡಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಡೆಟ್ರಾಯಿಟ್ ಪೊಲೀಸ್ ಇಲಾಖೆಯ ಅಧಿಕಾರಿ ಬೆಟ್ಟಿಸನ್ ಪ್ರತಿಕ್ರಿಯಿಸಿದ್ದು, ತನ್ನ ಅಧಿಕಾರಿಗಳು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುವಾಗ ತಮ್ಮನ್ನು ತಾವು ವೃತ್ತಿಪರ ರೀತಿಯಲ್ಲಿ ಪ್ರತಿನಿಧಿಸಬೇಕೆಂದು ಬಯಸುತ್ತದೆ. ಹಾಗೆಯೇ ವಿಚಾರಣೆಯಲ್ಲಿ ಭಾಗಿಯಾದ ಅಧಿಕಾರಿಯ ಕ್ರಮಗಳು ಈ ಇಲಾಖೆಯ ವೃತ್ತಿಪರತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)