

ನವದೆಹಲಿ: ಶ್ರೇಣಿಕೃತ ಜಾತಿ ವ್ಯವಸ್ಥೆಯ ಕರಾಳತೆ ವಿದೇಶಗಳಿಗೂ ಕಾಲಿಡಬಹುದು ಎಂದು ನೂರು ವರ್ಷಗಳಷ್ಟು ಹಿಂದೆಯೇ ಡಾ.ಬಿ.ಆರ್. ಅಂಬೇಡ್ಕರ್ ಮುಂಗಡಿದ್ದರು. ಅದೀಗ ವಾಸ್ತವವಾಗಿ ಬದಲಾಗಿದೆ.
ಮೇಲ್ವರ್ಗದ ಜಾತಿಯ ಸಿಬ್ಬಂದಿಯಿಂದ ದಲಿತನೊಬ್ಬ ಕಿರುಕುಳಕ್ಕೊಳಗಾದ ಪ್ರಕರಣದಲ್ಲಿ ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಫೇರ್ ಎಂಪ್ಲಾಯ್ಮೆಂಟ್ ಆ್ಯಂಡ್ ಹೌಸಿಂಗ್ ( ಸಮಾನ ಉದ್ಯೋಗಾವಕಾಶ ಹಾಗೂ ವಸತಿ ಇಲಾಖೆ) ಸಾಫ್ಟವೇರ್ ದೈತ್ಯ ಸಿಸ್ಕೋ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.
ಕೆಳ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಭಾರತೀಯ ಮೂಲದ ಅಮೆರಿಕನ್ ಮೇಲೆ ದೌರ್ಜನ್ಯ ಎಸಗಲು ಇಬ್ಬರು ಮ್ಯಾನೇಜರ್ಗಳಿಗೆ ಅವಕಾಶ ನೀಡಿದ ಆರೋಪವನ್ನು ಕಂಪನಿ ವಿರುದ್ಧ ಮಾಡಲಾಗಿದೆ.
ತಾರತಮ್ಯ, ದೌರ್ಜನ್ಯ ಹಾಗೂ ಪ್ರತೀಕಾರದ ಮನೋಭಾವವನ್ನು ಆತನ ವಿರುದ್ಧ ತೋರಲಾಗಿದೆ ಎಂದು ಸ್ಯಾನ್ಜೋಸ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಸಿಸ್ಕೋ ವಿರುದ್ಧದ ಅರ್ಜಿಯಲ್ಲಿ ಹೇಳಲಾಗಿದೆ.
ಕೆಳ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು, ಕಡಿಮೆ ಸಂಬಳ, ಸೀಮಿತ ಅವಕಾಶ ಹಾಗೂ ಇತರ ಕೀಳರಿಮೆಯ ಷರತ್ತಗಳನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿತ್ತು ಎಂದು ಹೇಳಿದೆ.
ಈ ಪ್ರಕರಣ ನೀರಿನಲ್ಲಿ ತೇಲುತ್ತಿರುವ ಮಂಜುಗಡ್ಡೆ ಪರ್ವತದ ತುದಿಯಿದ್ದಂತೆ ಎಂದು ಅಮೆರಿಕದ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ಸಂಸ್ಥೆ ಹೇಳಿದೆ. ಮೇಲ್ಜಾತಿಯ ಜನರಿಗೆ ಹೋಲಿಸಿದಲ್ಲಿ ದಲಿತರ ಸಂಖ್ಯೆ ಅಮೆರಿಕದಲ್ಲಿ ಭಾರಿ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಇಂಥ ಪ್ರಕರಣಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.