More

    ಗೂಡಂಗಡಿ ಮಾಲೀಕನ ಪುತ್ರನ ಸಾಧನೆ; UPSCಯಲ್ಲಿ 588ನೇ ರ್‍ಯಾಂಕ್

    ವಿಜಯಪುರ: ‘ಸಾಧಕನೆಂದೂ ಬಡವನಲ್ಲ, ಸಾಧನೆಗೆ ಬಡತನ ಅಡ್ಡಿಯಲ್ಲ’ ಎಂಬುದಕ್ಕೆ ಯುಪಿಎಸ್‌ಸಿ ಪಾಸ್ ಮಾಡಿದ ಗೂಡಂಗಡಿಕಾರನ ಪುತ್ರನೇ ಸಾಕ್ಷಿ.

    ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಹೊತ್ತ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಯುವಕ ಸತೀಶ ಯುಪಿಎಸ್‌ಸಿ ಪಾಸ್​ ಮಾಡುವ ಮೂಲಕ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದಾರೆ.

    ಸ್ವರ್ಗ ಧರೆಗಿಳಿದಂತಾಗಿದೆ

    ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಸತೀಶ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸತೀಶ ಸೋಮಜಾಳ 588ನೇ ರ್‍ಯಾಂಕ್​ ಪಡೆದಿದ್ದು, ಆ ಕುಟುಂಬದಲ್ಲೀಗ ಸ್ವರ್ಗ ಧರೆಗಿಳಿದಂತಾಗಿದೆ.

    ಸತೀಶ ಹುಟ್ಟೂರು ಹಿರೇಮಸಳಿಯಾದರೂ ಬಾಲ್ಯ ಕಳೆದಿದ್ದು ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ವಿಜಯಪುರ ನಗರದಲ್ಲಿ. ದೇವಣಗಾಂವದಲ್ಲಿ ಪೂರ್ವ ಪ್ರಾಥಮಿಕ (1ರಿಂದ 5) ಮುಗಿಸಿದ್ದು, 5 ರಿಂದ ದ್ವಿತೀಯ ಪಿಯುಸಿವರೆಗೆ ಸೈನಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು.

    UPSC Sathish
    ಸತೀಶ ಸೋಮಜಾಳ

    ಸೈನಿಕ ಶಾಲೆಯೇ ಪ್ರೇರಣೆ

    ಸೈನಿಕ ಶಾಲೆಯ ವಾತಾವರಣವೇ ಯುಪಿಎಸ್‌ಸಿ ತೇರ್ಗಡೆಯಾಗಲು ಪ್ರೇರಣೆ ಎನ್ನುತ್ತಾರೆ ಸತೀಶ. ಸೈನಿಕ ಶಾಲೆಯಲ್ಲಿ ಕಲಿತ ಅನೇಕರು ಪ್ರಸ್ತುತ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ. ಅವರಿಂದ ಪ್ರೇರಣೆ ಪಡೆದಿದ್ದಲ್ಲದೇ, ಬೆಳೆದು ಬಂದ ಬಗೆಯೇ ಯುಪಿಎಸ್‌ಸಿ ತೇರ್ಗಡೆಯಾಗಬೇಕೆಂಬ ಛಲ ಮೂಡಿಸಿತದೆ ಎಂದು ಹೇಳಿದ್ದಾರೆ.

    ಬೆಳಗಾವಿಯ ಗೋಗಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನೀಯರಿಂಗ್ ಪದವಿ ಪೂರೈಸಿದ ಸತೀಶ ಸೋಮಜಾಳ 2018ರಿಂದ ಯುಪಿಎಸ್‌ಸಿಗೆ ಸಿದ್ಧತೆ ನಡೆಸಿದರು. 2019ರಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಪ್ರಿಲಿಮ್ಸ್‌ನಲ್ಲಿ ಅನುತ್ತೀರ್ಣರಾದರು. 2020ರಲ್ಲಿ ಪ್ರಿಲಿಮ್ಸ್ ಪಾಸ್ ಮಾಡಿದರಾದರೂ ಮುಖ್ಯಪರೀಕ್ಷೆ ಕೈಕೊಟ್ಟಿತು.

    ಛಲಬಿಡದೆ ಪ್ರಯತ್ನಿಸಿದ ಸತೀಶಗೆ 2021ರಲ್ಲೂ ಪ್ರಿಲಿಮ್ಸ್ ಅನುತ್ತೀರ್ಣರಾದರು. ಕೊನೆಗೆ 2022ರಲ್ಲಿ 588ನೇ ರ್‍ಯಾಂಕ್​ನೊಂದಿಗೆ ತೇರ್ಗಡೆಯಾಗಿದ್ದು, ಇನ್ನೂ ರ್‍ಯಾಂಕ್​ ಉತ್ತಮಪಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಕುಟುಂಬಕ್ಕೆ ಅರ್ಪಣೆ

    ಸತತ ಪ್ರಯತ್ನ, ಗಂಭೀರ ಓದು, ತಾಳ್ಮೆಯೇ ಸಾಧನೆಗೆ ರಹದಾರಿ. ಪ್ರತಿ ದಿನ ಎಂಟು ಗಂಟೆಗಳ ಕಾಲ ಅಧ್ಯಯನೀಶಲನಾಗಿರುತ್ತಿದ್ದೆ. ಒಂದು ವರ್ಷ ದೆಹಲಿಯಲ್ಲಿ ತರಬೇತಿ ಪಡೆದೆ. ಬಡತನದಲ್ಲೂ ಬ್ಯಾಂಕ್ ಲೋನ್ ಪಡೆದು ಶಿಕ್ಷಣ ಪೂರೈಸಿದೆ.

    ತಂದೆ ಗೂಡಂಗಡಿ ಇಟ್ಟುಕೊಂಡು ಚೆನ್ನಾಗಿ ಓದಿಸಿದರು. ತಾಯಿ ಮತ್ತು ಸಹೋದರರ ಸಹಕಾರ ಸಾಧನೆಗೆ ಸಹಕಾರಿಯಾಯಿತು. ಈ ಸಾಧನೆಗೆ ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ. ಸಹಕರಿಸಿದ ಗುರು-ಹಿರಿಯರಿಗೆ ನಮಿಸುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts