

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಾಗರಿಕ ಸೇವೆಗಳ ಮುಖ್ಯಪರೀಕ್ಷೆ ಮತ್ತು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಮುಖ್ಯ ಪರೀಕ್ಷೆಯನ್ನು ಈ ಬಾರಿ ಒಟ್ಟೊಟ್ಟಿಗೆ ಎದುರಿಸಬೇಕಾದ ಸನ್ನಿವೇಶ ಅಭ್ಯರ್ಥಿಗಳಿಗೆ ಎದುರಾಗಿದೆ. ಈ ಎರಡೂ ಪರೀಕ್ಷೆ ನಡುವೆ ಹೆಚ್ಚಿನ ಅಂತರ ಇಲ್ಲದಿರುವ ಕಾರಣ ಎರಡೂ ಪರೀಕ್ಷೆಗಳಿಗೆ ಸಿದ್ಧರಾಗಿರುವ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿದೆ.
ಯುಪಿಎಸ್‌ಸಿ ಪರೀಕ್ಷೆಗಳು ಜ.8ರಿಂದ 10 ಹಾಗೂ 16, 17ರಂದು ನಡೆಯಲಿವೆ. ಇನ್ನು ಕೆಪಿಎಸ್‌ಸಿ ‘ಎ’ ವೃಂದದ ಮುಖ್ಯ ಪರೀಕ್ಷೆಗಳು ಡಿ.21ರಿಂದ 24 ಹಾಗೂ ‘ಎ’ ಮತ್ತು ‘ಬಿ’ ವೃಂದದ ಮುಖ್ಯ ಪರೀಕ್ಷೆ ಜ.2ರಿಂದ 5ರವರೆಗೆ ನಡೆಯಲಿದೆ.
ಎರಡೂ ಪರೀಕ್ಷೆಗಳ ಅಂತರ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಐಎಎಸ್, ಕೆಎಎಸ್ ಆಗಬೇಕೆಂಬ ಕನಸು ಕಂಡು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಜೀವನದಲ್ಲಿ ಈ ಎರಡೂ ಪರೀಕ್ಷೆಗಳು ಪ್ರಮುಖ. ಆದರೆ, ಈ ಪರೀಕ್ಷೆಗಳ ನಡುವೆ ಹೆಚ್ಚಿನ ಕಾಲವಕಾಶ ಇಲ್ಲದೇ ಇರುವುದರಿಂದ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗಲಿದೆ. ಇದರಿಂದಾಗಿ ಕೆಪಿಎಸ್‌ಸಿ ತನ್ನ ವೇಳಾಪಟ್ಟಿಯನ್ನು ಪರಿಷ್ಕೃರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳ ಕಾಲ ಮುಂದೂಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಈ ಹಿಂದೆಲ್ಲಾ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳ ಅವಧಿ ಅಂತರದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ 15 ದಿನಗಳ ಅಂತರ ಸಿಗುವುದು ಕೂಡ ಕಷ್ಟ. ಪರೀಕ್ಷೆ ಒತ್ತಡದಿಂದ ಅಭ್ಯರ್ಥಿಗಳಲ್ಲಿ ಅತ್ಮಸ್ಥೈರ್ಯು ಕುಗ್ಗಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ದಿನಾಂಕ ಗೊತ್ತುಪಡಿಸುವ ಬದಲು ಮನಸೋಇಚ್ಛೆ ವೇಳಾಪಟ್ಟಿ ರೂಪಿಸಿ ಬಿಡುಗಡೆ ಮಾಡಿರುವುದು ನಾಚೀಗೇಡಿನ ಸಂಗತಿ ಎಂದು ಅಭ್ಯರ್ಥಿಗಳು ಕೆಎಪಿಎಸ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡೂ ಒಂದೇ ಅಲ್ಲ: ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧರಾಗುವವರು ಕೆಎಎಸ್ ಪರೀಕ್ಷೆಗಳಿಗೂ ಸಿದ್ಧತೆ ನಡೆಸಿರುತ್ತಾರೆ. ಕೆಪಿಎಸ್‌ಸಿ ಈ ಬಾರಿ ಐಚ್ಛಿಕ ವಿಷಯವನ್ನು ತೆಗೆದಿದೆ. ಪರೀಕ್ಷೆಯ ಮೂಲ ಒಂದೇ ಆದರೂ ತಯಾರಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಠ 18 ಗಂಟೆ ಓದುವ ಒತ್ತಡದಲ್ಲಿರುತ್ತಾರೆ. ನಿರಂತರವಾಗಿ ಎರಡೂ ಪರೀಕ್ಷೆಗಳನ್ನು ಎದುರಿಸಬೇಕಾದಾಗ ಅವರು ಎದುರಿಸುವ ಮಾನಸಿಕ ದೈಹಿಕ ಒತ್ತಡ, ಆರೋಗ್ಯದ ತೊಂದರೆಗಳನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ನಿಗದಿ ಪಡಿಸಬೇಕಿತ್ತು ಎಂಬುದು ಅಭ್ಯರ್ಥಿಗಳ ಅಭಿಪ್ರಾಯ.
ಈ ವಿಚಾರವಾಗಿ ಕೆಪಿಎಸ್‌ಸಿ ಕಾರ್ಯದರ್ಶಿಯ ಪ್ರತಿಕ್ರಿಯೆ ಪಡೆಯಲು ವಿಜಯವಾಣಿ ಸಂಪರ್ಕಿಸಿತ್ತಾದರೂ ಅವರು ಕರೆ ಸ್ವೀಕರಿಸಲಿಲ್ಲ.
ಎರಡೂ ಪರೀಕ್ಷೆಗಳಿಗೂ ಏಕಕಾಲದಲ್ಲಿ ಸಿದ್ಧತೆ ನಡೆಸುವುದು ಕಷ್ಟ. ಇದರಿಂದ ಎರಡು ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಆಗುವುದಿಲ್ಲ. ಕೆಪಿಎಸ್‌ಸಿ ಅರ್ಜಿ ಆಹ್ವಾನಿಸುವುದೇ ಕಡಿಮೆ. ಇಂತಹ ಸಮಯದಲ್ಲಿ ಈ ರೀತಿ ಮಾಡಿದರೆ ಕೆಎಎಸ್ ಅಧಿಕಾರಿಯಾಗುವ ಕನಸು ನನಸಾಗದೆ ಹಾಗೇ ಉಳಿಯುತ್ತದೆ.
|ನೊಂದ ಅಭ್ಯರ್ಥಿ