3,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲೆ ಶುಲ್ಕ: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಹೀಗಿದೆ... UPI transactions

UPI transactions
Published on

UPI transactions : ಯುಪಿಐ ವಹಿವಾಟುಗಳಿಗೆ ಶೀಘ್ರದಲ್ಲೇ ಶುಲ್ಕ ವಿಧಿಸಲಾಗುವುದು ಎಂಬ ಸುದ್ದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ವಹಿವಾಟುಗಳಿಗೆ ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ದರ) ವಿಧಿಸಲಾಗುವುದು ಎಂಬ ಊಹಾಪೋಹಗಳು ಮತ್ತು ಸುದ್ದಿಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವಂಥದ್ದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ದೊಡ್ಡ ಪ್ರಮಾಣದ UPI ವಹಿವಾಟುಗಳ ಮೇಲೆ MDR ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆನ್‌ಲೈನ್‌ನಲ್ಲಿ ಹಲವಾರು ವರದಿಗಳು ಬಂದಿವೆ. ಆನ್‌ಲೈನ್ ವಹಿವಾಟುಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ವೆಚ್ಚಗಳನ್ನು ನಿರ್ವಹಿಸುವಲ್ಲಿ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರನ್ನು ಬೆಂಬಲಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅದರ ಭಾಗವಾಗಿ, 3,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲೆ MDR ಪರಿಚಯಿಸುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪ್ರತಿಕ್ರಿಯಿಸಿದ್ದು, ಸುಳ್ಳು ಪ್ರಚಾರವನ್ನು ನಂಬಬೇಡಿ ಎಂದು ಹಣಕಾಸು ಸಚಿವಾಲಯ ಸಾರ್ವಜನಿಕರಿಗೆ ಸಲಹೆ ನೀಡಿದೆ. ಸುಳ್ಳು ಪ್ರಚಾರವನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಈ ಪ್ರಚಾರವು ಜನರನ್ನು ದಾರಿತಪ್ಪಿಸುತ್ತಿದೆ ಮತ್ತು ಜನರಲ್ಲಿ ಅನಗತ್ಯ ಅನಿಶ್ಚಿತತೆ ಮತ್ತು ಭೀತಿಯನ್ನು ಉಂಟುಮಾಡುತ್ತಿದೆ ಎಂದು ಎಕ್ಸ್​ ಖಾತೆಯ ಮೂಲಕ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ. ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಿರ್ವಹಿಸುವ UPI, ಮೇ ತಿಂಗಳಲ್ಲಿ 1868 ಕೋಟಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ. ಹಲವಾರು ಅಡೆತಡೆಗಳ ಹೊರತಾಗಿಯೂ, ಏಪ್ರಿಲ್‌ನಲ್ಲಿ 1789 ಕೋಟಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಇದಕ್ಕೂ ಮೊದಲು, ಮಾರ್ಚ್‌ನಲ್ಲಿ 1830 ಕೋಟಿ ವಹಿವಾಟುಗಳನ್ನು ದಾಖಲಿಸಲಾಗಿದೆ. NPCI ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ 23.95 ಲಕ್ಷ ಕೋಟಿ ರೂ. ಮೌಲ್ಯದ UPI ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, ಮೇ ತಿಂಗಳಲ್ಲಿ 25.14 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net