
Sourav Ganguly : ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಬಿಸಿಸಿಐನ ಮಾಜಿ ಮುಖ್ಯಸ್ಥ ಸೌರವ್ ಗಂಗೂಲಿ ಆಯ್ಕೆ ಸಮಿತಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಶ್ರೇಯಸ್ ತಂಡದಲ್ಲಿ ಇರಬೇಕಿತ್ತು ಎಂದು ಹೇಳಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಕೆಲವು ಸಮಯದಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅವರನ್ನು ತಂಡದಲ್ಲಿ ಏಕೆ ಸೇರಿಸಿಕೊಳ್ಳಲಿಲ್ಲ ಎಂದು ಗಂಗೂಲಿ ಪ್ರಶ್ನಿಸಿದರು. ಭಾರತೀಯ ಟೆಸ್ಟ್ ತಂಡದಲ್ಲಿರಲು ಶ್ರೇಯಸ್ ಅವರಿಗೆ ಎಲ್ಲ ಅರ್ಹತೆಗಳಿವೆ. ಇತ್ತೀಚಿನ ದಿನಗಳಲ್ಲಿ ಶ್ರೇಯಸ್ ಅದ್ಭುತವಾಗಿ ಆಡುತ್ತಿದ್ದಾರೆ ಮತ್ತು ಒತ್ತಡದಲ್ಲಿಯೂ ರನ್ ಗಳಿಸುತ್ತಿದ್ದಾರೆ. ತಂಡದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರು ಸೂಕ್ತವಾಗಿ ಆಡುತ್ತಿದ್ದಾರೆ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ರೇಯಸ್ ಬಗ್ಗೆ ಗಂಗೂಲಿ ಮೆಚ್ಚುಗೆಯ ಮಾತುಗಳನ್ನಾಡಿದರು. ನಾನೇನಾದರೂ ಭಾರತದ ಆಯ್ಕೆದಾರನಾಗಿದ್ದರೆ, ಈ ಸಂದರ್ಭಗಳಲ್ಲಿ ಶ್ರೇಯಸ್‌ಗೆ ಖಂಡಿತವಾಗಿಯೂ ಅವಕಾಶ ನೀಡುತ್ತಿದ್ದೆ. ಅವರನ್ನು ತಂಡಕ್ಕೆ ಸೇರಿಸಿಕೊಂಡು ಏನು ಮಾಡುತ್ತಾರೆಂದು ನೋಡುತ್ತಿದ್ದೆ ಎಂದರು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯ ನಂತರ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ, ಈ ತಂಡದೊಂದಿಗೆ ಭಾರತ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ಆಶಿಸಿದರು. ಬುಮ್ರಾ ಅವರನ್ನು ಫಿಟ್ ಆಗಿ ಇರಿಸಿಕೊಳ್ಳಲು ಸಾಧ್ಯವಾದರೆ, ಇಂಗ್ಲೆಂಡ್‌ನಲ್ಲಿ ಭಾರತ ಸೋಲುವುದಿಲ್ಲ. 2020-21ರ ಆಸೀಸ್ ಪ್ರವಾಸದ ಸಮಯದಲ್ಲಿ ವಿರಾಟ್ ಮತ್ತು ರೋಹಿತ್ ಇಲ್ಲದೆ ಯುವ ಆಟಗಾರರಿಂದ ತುಂಬಿದ್ದ ತಂಡವು ಯಶಸ್ಸನ್ನು ಸಾಧಿಸಿತು ಎಂದು ಗಂಗೂಲಿ ನೆನಪಿಸಿಕೊಂಡರು.
ಇಂಗ್ಲೆಂಡ್ ಪ್ರವಾಸಕ್ಕೆ ಶ್ರೇಯಸ್ ಅವರನ್ನು ಆಯ್ಕೆ ಮಾಡದಿದ್ದಕ್ಕಾಗಿ ಅನೇಕ ಮಾಜಿ ಕ್ರಿಕೆಟಿಗರು ಭಾರತೀಯ ಆಯ್ಕೆ ಸಮಿತಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಪಟ್ಟಿಗೆ ಸೌರವ್ ಗಂಗೂಲಿ ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವುದು ಅನ್ಯಾಯ ಎಂದು ಗಂಗೂಲಿ ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಶ್ರೇಯಸ್ ಕೊರತೆ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಆಯ್ಕೆದಾರರು ತಂಡವನ್ನು ಘೋಷಿಸಿದರು. ಭಾರತೀಯ ತಂಡವು ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದು, ತರಬೇತಿಯನ್ನು ಪ್ರಾರಂಭಿಸಿದೆ. ಜೂನ್ 20 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಶುಭಮನ್ ಗಿಲ್ ಈ ಸರಣಿಯೊಂದಿಗೆ ಭಾರತದ ನಾಯಕರಾಗಿ ಪಾದರ್ಪಣೆ ಮಾಡಲಿದ್ದಾರೆ. ರೋಹಿತ್ ಶರ್ಮ ನಿವೃತ್ತಿ ಘೋಷಿಸಿದ ನಂತರ ಈ ಸರಣಿಗೆ ಮುಂಚಿತವಾಗಿ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಈ ಸರಣಿಗೆ ಮುಂಚಿತವಾಗಿ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಈ ಕೆಳಕಂಡಂತಿದೆ
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕರುಣ್ ನಾಯರ್, ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ರಿಷಭ್ ಪಂತ್, ಕೆಎಲ್ ರಾಹುಲ್, ಧ್ರುವ ಜುರೆಲ್, ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ವೇಳಾಪಟ್ಟಿ
* ಜೂನ್ 20-24- ಮೊದಲ ಟೆಸ್ಟ್ (ಲೀಡ್ಸ್)
* ಜುಲೈ 2-6- ಎರಡನೇ ಟೆಸ್ಟ್ (ಬರ್ಮಿಂಗ್ಹ್ಯಾಮ್)
* ಜುಲೈ 10-14- ಮೂರನೇ ಟೆಸ್ಟ್ (ಲಾರ್ಡ್ಸ್)
* ಜುಲೈ 23-27- ನಾಲ್ಕನೇ ಟೆಸ್ಟ್ (ಮ್ಯಾಂಚೆಸ್ಟರ್)
* ಜುಲೈ 31-ಆಗಸ್ಟ್ 4- ಐದನೇ ಟೆಸ್ಟ್ (ಕೆನ್ನಿಂಗ್ಸ್ಟನ್ ಓವಲ್)
ಅಮೆರಿಕದ ಅಟ್ಲಾಂಟದಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ! Ahilyabai Holkar
ನಟಿ ಶ್ರೀಲೀಲಾಗಾಗಿ ಸಚಿವರ ಭಾಷಣವನ್ನೇ ನಿಲ್ಲಿಸಿದ ನಿರೂಪಕಿ! ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ… Sreeleela