ನೀವು ಲವ್​ ಬ್ರೇಕಪ್‌ ನೋವಿನಿಂದ ಹೊರಬರಲು ಬಯಸಿದರೆ ತಪ್ಪದೇ ಈ ಸಲಹೆಗಳನ್ನು ಅನುಸರಿಸಿ... Breakup Tips

Breakup Tips
Published on

Breakup Tips : ಪ್ರೀತಿಯ ಮಧುರ ಅನುಭವವನ್ನು ನೀವು ಆನಂದಿಸುತ್ತಿರುವ ಸಮಯದಲ್ಲಿ ನಿಮ್ಮ ನಡುವೆ ಹಾದುಹೋಗುವ ಕ್ಷಣಗಳು ಅಸಂಖ್ಯಾತವಾಗಿರುತ್ತವೆ. ಆ ಸಮಯದಲ್ಲಿ, ನೀವು ಎಲ್ಲಿ ನೋಡಿದರೂ ಪ್ರೀತಿಯೇ ತುಂಬಿರುತ್ತದೆ. ಪ್ರೀತಿಯಲ್ಲಿರುವಾಗ ಜಗವೆಲ್ಲ ಸುಂದರವಾಗಿಯೇ ಕಾಣುತ್ತದೆ. ದೇಹದಲ್ಲಿ ಉತ್ಸಾಹದ ಚಿಲುಮೆ ಸದಾ ಚಿಮ್ಮುತ್ತಿರುತ್ತದೆ. ಆದರೆ, ಅದೇ ಪ್ರೀತಿ ವಿಫಲವಾದರೆ ಅದಕ್ಕಿಂತ ನರಕ ಮತ್ತೊಂದಿಲ್ಲ. ಸುಂದರವಾದ ಜಗತ್ತು ಇದ್ದಕ್ಕಿದ್ದಂತೆ ಶೂನ್ಯದಂತೆ ಕಾಣುತ್ತದೆ. ಎಲ್ಲೆಡೆ ಹತಾಸೆ ಮನೋಭಾವವೇ ತುಂಬಿಕೊಳ್ಳುತ್ತದೆ.

ಪ್ರೀತಿಯಲ್ಲಿ ಮೋಸ ಹೋಗುವ ಕೆಲವರು ಅದರಿಂದ ಹೊರಬರಲಾಗದೇ ನಿತ್ಯವೂ ನರಳಾಡುತ್ತಾ ಸಾವಿನ ಕದವನ್ನು ತಟ್ಟುತ್ತಾರೆ. ಕೆಲವರಂತೂ ಲೌಕಿಕ ಜಗತ್ತನ್ನು ಮರೆತು ಹುಚ್ಚರಂತೆ ವರ್ತಿಸುತ್ತಾರೆ. ಆದರೆ, ಪ್ರೀತಿಗಿಂತಲೂ ಸುಂದರವಾದ ಜೀವನ ಇದೆ ಎಂಬುದನ್ನು ಮರೆಯಬಾರದು. ಅಲ್ಲದೆ, ಪ್ರೀತಿಯಲ್ಲಿ ವಿಫಲವಾದರೆ, ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಅವಕಾಶವೂ ಕೂಡ ನಮ್ಮಲ್ಲಿಯೇ ಇರುತ್ತದೆ. ಹೀಗಾಗಿ ಲವ್​ ಬ್ರೇಕಪ್​ ಮಾಡಿಕೊಂಡವರಿಗೆ ಒಂದಿಷ್ಟು ಟಿಪ್ಸ್​ ಇಲ್ಲಿದೆ.

ಪಾಠವಾಗಿ ತೆಗೆದುಕೊಳ್ಳಿ

ಮೊದಲ ನಿಯಮವೆಂದರೆ, ಏನೇ ನಡೆದಿದ್ದರೂ, ಅದು ನಮ್ಮ ಒಳ್ಳೆಯದಕ್ಕಾಗಿಯೇ ನಡೆದಿದೆ ಎಂದು ನಾವು ನಂಬಬೇಕು. ಉದಾಹರಣೆಗೆ, ಇಬ್ಬರು ಜನರ ನಡುವೆ ರೂಪುಗೊಂಡ ಬಂಧವು ನಿಜವಾಗಿದ್ದರೆ, ಅದು ಎಂದಿಗೂ ಮುರಿಯುವುದಿಲ್ಲ. ಅದು ಬೇರ್ಪಡುವಿಕೆಗೆ ಕಾರಣವಾದರೆ ಎರಡೂ ಕಡೆಗಳಲ್ಲಿ ತಪ್ಪುಗಳಿವೆ ಎಂದರ್ಥ. ಆ ಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಏನೇ ಸಂಭವಿಸಿದರೂ, ನಾವು ಅದನ್ನು ಪಾಠವಾಗಿ ತೆಗೆದುಕೊಳ್ಳಬೇಕು. ನಾವು ಮಾಡಿದ ತಪ್ಪುಗಳಿಂದ ಕಲಿಯಬೇಕು. ನಾವು ಜೀವನದಲ್ಲಿ ಮುಂದುವರಿಯಬೇಕು.

ನಿಮ್ಮನ್ನು ಪ್ರೀತಿಸಲು ಕಲಿಯಿರಿ

ಬ್ರೇಕಪ್ ನಂತರ ಅನೇಕ ಜನರು ಮಾಡುವ ತಪ್ಪು ಏನೆಂದರೆ, ತಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸುವುದು. ಮೊದಲು ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಪ್ರೀತಿಯಲ್ಲಿ ಬೀಳುವ ಮೊದಲು ನೀವು ಹೇಗಿದ್ದೀರಿ ಎಂಬುದನ್ನು ನೆನಪಿಡಿ. ನಿಮ್ಮ ಕನಸುಗಳನ್ನು ನನಸು ಮಾಡಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವತ್ತೆ ಸಮಯ ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ಸ್ವಲ್ಪ ಶಾಂತಿಯನ್ನು ನೀಡುವುದಲ್ಲದೆ ನಿಮಗೆ ಹೊಸ ಉತ್ಸಾಹವನ್ನು ನೀಡುತ್ತದೆ.

ಒಂಟಿತನವನ್ನು ಬಿಡಿ

ಸಾಮಾನ್ಯವಾಗಿ ನೀವು ಒಬ್ಬಂಟಿಯಾಗಿರುವಾಗ, ನಿಮ್ಮ ಆಲೋಚನೆಗಳು ಅಸ್ತವ್ಯಸ್ತವಾಗಿರುತ್ತವೆ. ನಿಮ್ಮ ಮನಸ್ಸು ಕೂಡ ನಿಯಂತ್ರಣದಲ್ಲಿ ಇರುವುದಿಲ್ಲ. ನೀವು ಬ್ರೇಕಪ್​ ಸಮಯದಲ್ಲಿ ಒಬ್ಬಂಟಿಯಾಗಿದ್ದರೆ ನೀವು ಸಂಪೂರ್ಣ ಖಿನ್ನತೆಗೆ ಒಳಗಾಗುತ್ತೀರಿ. ಸಾಯುವ ಕೆಟ್ಟ ಆಲೋಚನೆಗಳು ಸಹ ಬರುತ್ತವೆ. ಅದಕ್ಕಾಗಿಯೇ ನೀವು ಹೆಚ್ಚಾಗಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವೆ ಇರಬೇಕು. ಅಲ್ಲದೆ, ಯಾವಾಗಲೂ ಏನನ್ನಾದರೂ ಮಾಡಿ ಮತ್ತು ನಿಮ್ಮ ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ಬೇರೆಡೆಗೆ ತಿರುಗಿಸಿ.

ಎರಡನೇ ಅವಕಾಶ ಕೊಡಿ

ಬ್ರೇಕಪ್​ ನಂತರ ಅನೇಕ ಜನರು ಎರಡನೇ ಅವಕಾಶವನ್ನು ನೀಡಲು ಹಿಂಜರಿಯುತ್ತಾರೆ. ಮೊದಲ ಪ್ರೀತಿಗೆ ಹೋಲಿಸಿಕೊಂಡು ಹೆದರುತ್ತಾರೆ. ತಮಗಾಗಿ ಕೆಲವು ನಿಯಮಗಳನ್ನು ರೂಪಿಸಿಕೊಳ್ಳುತ್ತಾರೆ. ನೆನಪಿಡಿ, ಎಲ್ಲರು ಕೂಡ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಒಬ್ಬರ ಬಗ್ಗೆ ಮುಂಚಿತವಾಗಿ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಅಲ್ಲದೆ, ನೀವು ವಿಧಿಸಿರುವ ನಿಯಮಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಒಳ್ಳೆಯದಲ್ಲ. ಹೀಗಾಗಿ ಪ್ರೀತಿಯಲ್ಲಿ ಎರಡನೇ ಅವಕಾಶ ನೀಡಿ ಮತ್ತು ಬಲವಾಗಿ ಮುಂದಕ್ಕೆ ಹೆಜ್ಜೆ ಹಾಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net