2 ವರ್ಷಗಳ ಬಳಿಕ ಉಪೇಂದ್ರ ತೆರೆ ಮೇಲೆ! ‘ಹೋಮ್ ಮಿನಿಸ್ಟರ್’ ಚಿತ್ರದ ರಿಲೀಸ್ ಡೇಟ್?

Published on
ಬೆಂಗಳೂರು: ನಟ ಉಪೇಂದ್ರ ಅಭಿಮಾನಿಗಳಿಗೆ ನಿಜಕ್ಕೂ ಒಂದು ಸಿಹಿ ಸುದ್ದಿ ಇದು. ಹೌದು, 2019ರಲ್ಲಿ ತೆರೆಗೆ ಬಂದ ‘ಐ ಲವ್​ ಯೂ’ ಸಿನಿಮಾದ ಬಳಿಕ ನಟ ಉಪೇಂದ್ರ ಅವರನ್ನು ತೆರೆ ಮೇಲೆ ನೋಡುವ ಖುಷಿ ಅಭಿಮಾನಿಗಳಿಗೆ ಸಿಕ್ಕಿಲ್ಲ. ಆದರೆ, ಇದೀಗ ಉಪೇಂದ್ರ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಅವುಗಳ ಪೈಕಿ ನಟ ಉಪೇಂದ್ರ ಅವರು ಅಭಿನಯಿಸಿರುವ ‘ಹೋಮ್ ಮಿನಿಸ್ಟರ್’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತು. ಈಗ, ನಟಿ ವೇದಿಕಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳರುವ ಈ ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಸಿದೆ.
ಕೊನೆಗೂ, ಮತ್ತೆ ನಟ ಉಪೇಂದ್ರ ಅವರನ್ನು ಪರದೆಯ ಮೇಲೆ ನೋಡಲು ಅಭಿಮಾನಿಗಳು ರೆಡಿಯಾಗಿದ್ದಾರೆ. ಅಂದಹಾಗೆ, ‘ಹೋಮ್ ಮಿನಿಸ್ಟರ್’ ಇದೇ ಏಪ್ರಿಲ್‌‌ 1ಕ್ಕೆ ತೆರೆಗಪ್ಪಳಿಸಲಿದೆ. ಸಿನಿಮಾದ ರಿಲೀಸ್ ದಿನಾಂಕವನ್ನು ನಟ ಉಪೇಂದ್ರ ಪೋಸ್ಟರ್ ಒಂದನ್ನು ಅನಾವರಣಗೊಳಿಸುವ ಮೂಲಕ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ನಟ ಉಪೇಂದ್ರ, ‘ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ, ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ನನ್ನ ಈ ಸಿನಿಮಾವನ್ನು ನಿರ್ಮಾಸಿದ್ದಾರೆ.‌ ತೆಲುಗಿನ ಇನ್ನೂ ನೂರು ನಿರ್ಮಾಪಕರು ಬಂದು ನಮ್ಮ ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ ‘ಹೋಮ್ ಮಿನಿಸ್ಟರ್’ ಚಿತ್ರವನ್ನು ಪ್ರೇಕ್ಷಕರು ಯಶಸ್ವಿ ಮಾಡಬೇಕು'', ಎಂದು ಹೇಳಿದರು.
ಇನ್ನು, ಈ ಚಿತ್ರದ ನಾಯಕಿಯಾಗಿರುವ ನಟಿ ವೇದಿಕಾ, '‘ಬಹಳ ದಿನಗಳ ನಂತರ ನಿಮ್ಮ ಮುಂದೆ ಬರುತ್ತಿದ್ದೇನೆ. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿದ್ದು ಖುಷಿ ತಂದಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನಾನು ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ'', ಎಂಬ ಮಾಹಿತಿ ನೀಡಿದ್ದಾರೆ. ಅಂದಹಾಗೆ, ರಾಜ್ಯದಾದ್ಯಂತ ಸುಮಾರು 350ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಉಪೇಂದ್ರ ಅವರ ‘ಹೋಮ್ ಮಿನಿಸ್ಟರ್’ ರಿಲೀಸ್ ಆಗಲಿದೆ. ಸುಜಯ್ ಕೆ. ಶ್ರೀಹರಿ ನಿರ್ದೇಶನದ ಈ ಚಿತ್ರಕ್ಕೆ ಜಿಬ್ರಾನ್ ಸಂಗೀತ ನೀಡಿದ್ದು, ಕುಂಟುನಿ ಎಸ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಅಂಟೋನಿ ಅವರ ಸಂಕಲನ ಇದೆ. ಚಿತ್ರದಲ್ಲಿ ನಟಿ ವೇದಿಕಾ, ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net