

Lucknow: ಉತ್ತರ ಪ್ರದೇಶದ ಮೀರತ್ನ ಜವಳಿ ವ್ಯಾಪಾರಿ ಮನೆಯಲ್ಲಿ ನಡೆದ 30 ಲಕ್ಷ ರೂಪಾಯಿ ಕಳ್ಳತನ ಪ್ರಕರಣವನ್ನು ಭೇದಿಸಿರುವ ಯುಪಿ ಪೊಲೀಸರು, ವ್ಯಾಪಾರಿಯ ಹೆಂಡತಿಯನ್ನು(UP woman) ಬಂಧಿಸಿದ್ದಾರೆ.
ಅಕ್ಟೋಬರ್ 15 ರಂದು ಬಟ್ಟೆ ವ್ಯಾಪಾರಿ ಪಿಯೂಷ್ ಮಿತ್ತಲ್ ಮನೆಯಲ್ಲಿ ಕಳ್ಳತನ ನಡೆದಿದ್ದು, ದೂರಿನಲ್ಲಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ 50,000 ರೂಪಾಯಿ ನಗದು ಮತ್ತು ಆಭರಣಗಳು ಕಳ್ಳತನವಾಗಿವೆ ಎಂದು ತಿಳಿದುಬಂದಿದೆ. ಈ ಕೃತ್ಯದಲ್ಲಿ ವ್ಯಾಪಾರಿಯ ಪತ್ನಿ ಪೂಜಾ ಮಿತ್ತಲ್ ಅಷ್ಟೆ ಅಲ್ಲದೇ, ಅತ್ತೆ ಅನಿತಾ (53), ಸೋದರ ಮಾವ ರವಿ ಬನ್ಸಾಲ್ (36) ಮತ್ತು ದೀಪಕ್ (24) ಎಂಬಾತರನ್ನು ಬಂಧಿಸಲಾಗಿದೆ. ಪೊಲೀಸರು ಕಳ್ಳತನವಾಗಿರುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20,400 ರೂ. ಮೌಲ್ಯದ ಬೆಳ್ಳಿ, 35,500 ರೂ. ನಗದು ಮತ್ತು ಅಪರಾಧಕ್ಕೆ ಬಳಸಲಾದ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಆರು ತಿಂಗಳ ಹಿಂದೆ ಪಿಯೂಷ್‌ನನ್ನು ಎರಡನೇ ಮದುವೆಯಾದ ಪೂಜಾ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದಿಂದ ಬಂದವಳು. ಆಕೆಯ ಸಹೋದರ ರವಿ ಇತ್ತೀಚೆಗೆ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದನು ಮತ್ತು ಅವನ ಚಿಕಿತ್ಸೆಗೆ ಕುಟುಂಬಕ್ಕೆ ಹಣದ ಕೊರತೆಯಿತ್ತು. ಇದರಿಂದಾಗಿ ಪೂಜಾ ತನ್ನ ಗಂಡನ ಮನೆಯಿಂದಲೇ ಕಳ್ಳತನ ಮಾಡುವ ಯೋಜನೆಯನ್ನು ರೂಪಿಸಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೂಜಾ ಮತ್ತು ಆಕೆಯ ಪತಿ ಮಧ್ಯಾಹ್ನ 3:15 ರಿಂದ ಸಂಜೆ 6:00 ರ ನಡುವೆ ಶಾಪಿಂಗ್‌ಗೆ ಹೋಗಿದ್ದರು. ಹೊರಡುವ ಮೊದಲು, ಪೂಜಾ ರವಿಗೆ ಮನೆ ಎಷ್ಟು ಸಮಯದಲ್ಲಿ ಖಾಲಿ ಇರುತ್ತದೆ ಎಂದು ತಿಳಿಸಿ ಲಾಕರ್ ಕೀ ಇರುವ ಸ್ಥಳವನ್ನು ಬಹಿರಂಗಪಡಿಸಿದ್ದಳು. ಮಧ್ಯಾಹ್ನ 2:30 ರ ಸುಮಾರಿಗೆ, ರವಿ ಮತ್ತು ದೀಪಕ್ ಮಯೂರ್ ವಿಹಾರ್‌ನಿಂದ ಸ್ವಿಫ್ಟ್ ಕಾರಿನಲ್ಲಿ ಹೊರಟು 3:36 ರ ಹೊತ್ತಿಗೆ ಟಿಪಿ ನಗರ ತಲುಪಿದರು. ದೀಪಕ್, ಪಿಯೂಷ್ ನಿವಾಸವನ್ನು ತಲುಪಲು ಇ-ರಿಕ್ಷಾ ಬಳಸಿದ್ದರು ಎಂದು ತಿಳಿದುಬಂದಿದೆ. ಮನೆಗೆ ಪ್ರವೇಶಿಸಿದ ದೀಪಕ್, ಪೂರ್ವ ಯೋಜನೆಯಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು, ಬಳಿಕ ಅಲ್ಲಿಂದ ರಿಥಾನಿ ಮೆಟ್ರೋ ನಿಲ್ದಾಣಕ್ಕೆ ತೆರಳಿದರು, ಅಲ್ಲಿ ರವಿ ಅವನಿಗಾಗಿ ಕಾಯುತ್ತಿದ್ದನು. ಅದೇ ಸಂಜೆ ಅವರೆಲ್ಲಾ ದೆಹಲಿಗೆ ಹಿಂತಿರುಗಿದರು ಎನ್ನಲಾಗಿದೆ. ನಾಲ್ವರು ಆರೋಪಿಗಳ ಬಂಧನದೊಂದಿಗೆ ತನಿಖೆ ಮುಕ್ತಾಯವಾಗಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)