ಚಳಿ ಕಾಯಿಸಲು ಹಾಕಿದ್ದ ಬೆಂಕಿಯಿಂದ ಉಸಿರುಗಟ್ಟಿ ಐವರು ಮಕ್ಕಳು ಸಾವು

Suffocate
Published on

ಲಖನೌ: ಚಳಿ ಕಾಯಿಸಲು ಹಾಕಿದ್ದ ಬೆಂಕಿಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ಐದು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುನ್ವರ್​ ಅನುಪಮ್​ ಸಿಂಗ್​, ಮನೆಯೊಳಗೆ ಕಲ್ಲಿದ್ದಿಲನ್ನು ಸುಟ್ಟಿದ್ದರು, ಅದರ ಹೊಗೆ ದಟ್ಟವಾಗಿ ತುಂಬಿತ್ತು, ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ರಹೀಜುದ್ದೀನ್ ಎಂಬುವರಿಗೆ ಸೇರಿದ ಮನೆಯಾಗಿದ್ದು, ಅವರ ಮೂವರು ಮಕ್ಕಳು ಮತ್ತು ಅವರ ಸಂಬಂಧಿಕರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ. ಸೋಮವಾರ ರಾತ್ರಿ ಕುಟುಂಬದ ಏಳು ಮಂದಿ ಮಲಗಲು ಹೋಗಿದ್ದು, ಮಂಗಳವಾರ ಸಂಜೆಯಾದರೂ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು. ಬಾಗಿಲು ಮುರಿದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಇಂಗಾಲದ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಹಾನಿಕಾರಕ ಅನಿಲಗಳು ಕೊಠಡಿಯಲ್ಲಿರುವಾಗ ಕೋಣೆಯ ಬಾಗಿಲು ಹಾಕಿದರೆ ಅದು ಉಸಿರುಗಟ್ಟುವಕೆಗೆ ಕಾರಣವಾಗಬಹುದು, ದೀರ್ಘಕಾಲ ಅದನ್ನು ಉಸಿರಾಡುವುದರಿಂದ ಸಾವು ಸಂಭವಿಸಬಹುದು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುನ್ವರ್​ ಅನುಪಮ್​ ಸಿಂಗ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net