ಮುಸ್ಕಾನ್​, ಸೋನಮ್​ ಈಗ... ಮನೆಯ ಹಿತ್ತಲಿನಲ್ಲಿ ಪತಿಗೆ ಗುಂಡಿ ತೋಡಿದ ಪತ್ನಿ! 8 ತಿಂಗಳ ಬಳಿಕ ಅಸ್ಥಿಪಂಜರ ಪತ್ತೆ | Murder Case

ವಿಜಯವಾಣಿ (52)
Published on

Murder Case: ಪತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ನೀಲಿ ಡ್ರಮ್​ನಲ್ಲಿ ಮುಚ್ಚಿಟ್ಟ ಮಸ್ಕಾನ್​ ಪ್ರಕರಣ, ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಸೋನಮ್​ಳಿಂದ ಕೊಲೆಯಾದ ರಾಜಾ ರಘುವಂಶಿಯ ಹನಿಮೂನ್​ ಹತ್ಯೆ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಇಂಥಾ ಕೇಸ್​ಗಳು ಹೊರಬಿದ್ದ ಬೆನ್ನಲ್ಲೇ ಅನೇಕ ಯುವಕರು ತಾವು ಮದುವೆಯಾಗುವುದೇ ಬೇಡ ಎಂಬ ಯೋಚನೆ ಮಾಡಿದ್ದೂ ಉಂಟು. ಇದೇ ರೀತಿಯ ಮತ್ತೊಂದು ಕೊಲೆ ಕೇಸ್ ಇದೀಗ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ತನ್ನ ಕಾಮತೃಷೆ ತೀರಿಸಿಕೊಳ್ಳುವ ಸಲುವಾಗಿ ಪ್ರಿಯಕರನೊಂದಿಗೆ ಕೈಜೋಡಿಸಿದ ಕಿರಾತಕಿ, ಗಂಡನನ್ನೇ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ. ಪತಿಗೆ ನಿದ್ರಾಜನಕ ಡ್ರಗ್ಸ್​ ಬೆರೆಸಿದ ಚಹಾ ಕುಡಿಸಿ, ಗುದ್ದಲಿಯಿಂದ ಭೀಕರವಾಗಿ ಥಳಿಸಿ, ಆತನನ್ನು ಮನೆಯ ಹಿತ್ತಲಿನಲ್ಲಿ ಹೂತುಹಾಕಿದ 10 ತಿಂಗಳ ಬಳಿಕ ಈ ಪ್ರಕರಣ ಬಯಲಿಗೆ ಬಂದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಭಾನುವಾರ (ಸೆ.07) ಮೃತ ವ್ಯಕ್ತಿಯ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆದ ಖಾಕಿ, ಈ ಭೀಕರ ಕೊಲೆ ಹಿಂದಿದ್ದ ಆತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಸದ್ಯ ಬಂಧಿಸಿದ್ದಾರೆ.

ಪತಿಯೇ ಇಲ್ಲದಿದ್ದರೇ?

ವರದಿಗಳ ಪ್ರಕಾರ, ಸುಮಾರು 10 ತಿಂಗಳ ಹಿಂದೆ, ಆರೋಪಿ ಲಕ್ಷ್ಮಿ ತನ್ನ ಪತಿ ಶಿವಬೀರ್ ಸಿಂಗ್ (50) ಕೆಲಸಕ್ಕಾಗಿ ಗುಜರಾತ್‌ಗೆ ಹೋಗಿದ್ದರು ಎಂದು ಹೇಳಿಕೊಂಡಿದ್ದಳು. ಇದೇ ವೇಳೆ ಮೃತನ ತಾಯಿ ಸಾವಿತ್ರಿ ದೇವಿ, ಮಗನಿಗೆ ಹಲವಾರು ಬಾರಿ ಫೋನ್​ ಮಾಡಲು ಪ್ರಯತ್ನಿಸಿದ್ದರು. ಆದರೆ, ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಕಾರಣ, ಆತನ ಫೋನ್​ ಸ್ವಿಚ್ ಆಫ್​ ಆಗಿತ್ತು. ದಿನಗಳು ಕಳೆದಂತೆ ಪ್ರಕರಣ ಬೆನ್ನತ್ತಿದ ಖಾಕಿ ಪಡೆಗೆ, ಸಾವಿತ್ರಿ ದೇವಿಯ ಅನುಮಾನಗಳೇ ಕೊಲೆ ಆರೋಪಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿತು.

ಆಗಸ್ಟ್ 19ರಂದು ಮಿಸ್ಸಿಂಗ್​ ಕೇಸ್​ನಡಿ ದೂರು ದಾಖಲಿಸಿಕೊಂಡ ಪೊಲೀಸರು, ಸಿಂಗ್​ ಪತ್ನಿಯನ್ನು ತನಿಖೆಗೆ ಒಳಪಡಿಸಿದರು. ನಿರಂತರ ವಿಚಾರಣೆಯಲ್ಲಿ ಕಡೆಗೂ ಸತ್ಯ ಕಕ್ಕಿದ ಆರೋಪಿ, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ದಾಖಲೆಯ ಆಧಾರದ ಮೇಲೆ ಆರೋಪಿಗಳಾದ ಲಕ್ಷ್ಮಿ, ಆಕೆಯ ಸೋದರಳಿಯ ಮತ್ತು ಪ್ರೇಮಿ ಅಮಿತ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಚಹಾದಲ್ಲಿ ಮಾದಕ ದ್ರವ್ಯ!

ಪತಿಗೆ ಮಾದಕ ದ್ರವ್ಯ ಬೆರೆಸಿದ ಚಹಾ ನೀಡಿದ ಲಕ್ಷ್ಮಿ, ಪ್ರಿಯಕರನ ಜೊತೆಗೆ ಸೇರಿಕೊಂಡು ಗುದ್ದಲಿಯಿಂದ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾಳೆ. ನಂತರದಲ್ಲಿ ಮನೆಯ ಹಿತ್ತಲಿನಲ್ಲಿ ಗುಂಡಿ ತೋಡಿ ಆತನ ಮೃತದೇಹವನ್ನು ಹೂತಿದ್ದಾಳೆ ಎಂದು ಸಹಾಯಕ ಪೊಲೀಸ್ ಆಯುಕ್ತ ಪಂಕಿ ಶಿಖರ್ ಹೇಳಿದ್ದಾರೆ. ಸ್ಥಳದಲ್ಲಿ ಸಿಕ್ಕ ಶವಪೆಟ್ಟಿಗೆ ಮತ್ತು ಲಾಕೆಟ್ ಶಿವಬೀರ್ ಅವರದ್ದೇ ಎಂದು ಕುಟುಂಬಸ್ಥರು ದೃಢಪಡಿಸಿದ್ದಾಗಿ ಖಾಕಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net