

T20 Asia Cup: ನಾಳೆಯಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ಸೇರಿ ಒಟ್ಟು 8 ತಂಡಗಳು ಭರ್ಜರಿ ಪೈಪೋಟಿಗೆ ಸಜ್ಜಾಗಿವೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿರುವ ಹಿನ್ನೆಲೆ ಈ ಬಾರಿಯ ಏಷ್ಯಾ ಕಪ್ ಅನ್ನು ಟಿ20 ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಏಕದಿನ ಬಿಟ್ಟು ಟಿ20 ಫಾರ್ಮೆಟ್ನಡಿ ನಡೆಸುತ್ತಿರುವುದು ಇದು ಮೂರನೇ ಬಾರಿಗೆ. ಇಲ್ಲಿಯವರೆಗೆ, ಟಿ20 ಸ್ವರೂಪದಲ್ಲಿ ಎರಡು ಬಾರಿ ಮಾತ್ರ ಆಯೋಜಿಸಲಾಗಿತ್ತು.
ಇನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಅಖಾಡಕ್ಕಿಳಿಯುತ್ತಿರುವ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಕ್ರಿಕೆಟ್ ಪ್ರೇಮಿಗಳು ಎದುರುನೋಡುತ್ತಿದ್ದಾರೆ. ಟಿ20 ಏಷ್ಯಾಕಪ್ ಟೂರ್ನಿ ಎಂದಾಗ ಈ ಫಾರ್ಮೆಟ್ನಡಿ ಯಾವ ಬ್ಯಾಟರ್ಗಳು ಸ್ಫೋಟಕ ಇನ್ನಿಂಗ್ಸ್ ನೀಡಿದ್ದಾರೆ? ತಮ್ಮ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ್ದಾರೆ? ಎಂಬುದರ ವಿವರ ಹೀಗಿದೆ.
ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಭಾರತದ ಮಾಜಿ ಕ್ಯಾಪ್ಟನ್, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ. ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 85.80 ಸರಾಸರಿಯಲ್ಲಿ 429 ರನ್ ಗಳಿಸಿದ್ದಾರೆ. 2022ರ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಬಾರಿಸಿದ್ದು, ಕೊಹ್ಲಿಯ ಅತ್ಯಧಿಕ ಸ್ಕೋರ್.
ಪಾಕಿಸ್ತಾನದ ಮೊಹಮ್ಮದ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2022 ರ ಏಷ್ಯಾ ಕಪ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 56.20 ರ ಸರಾಸರಿಯಲ್ಲಿ 281 ರನ್ ಗಳಿಸಿದ್ದರು. ಆದಾಗ್ಯೂ.. ಅವರು ಫಾರ್ಮ್‌ನಲ್ಲಿ ಕಷ್ಟಪಡುತ್ತಿದ್ದರು ಮತ್ತು ಈ ಬಾರಿ ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಪ್ರಸ್ತುತ, ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮ, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ 2016 ಮತ್ತು 2022ರ ಆವೃತ್ತಿಗಳಲ್ಲಿ ಆಡಿದ್ದು, 9 ಇನ್ನಿಂಗ್ಸ್‌ಗಳಲ್ಲಿ 30.11ರ ಸರಾಸರಿಯಲ್ಲಿ ಒಟ್ಟು 271 ರನ್ ಗಳಿಸಿದ್ದಾರೆ. ಕೊಹ್ಲಿಯಂತೆ ಟಿ20ಗೆ ವಿದಾಯ ಹೇಳಿರುವ ರೋಹಿತ್, ಈ ಬಾರಿಯ ಏಷ್ಯಾ ಕಪ್‌ನಲ್ಲಿ ಆಡುತ್ತಿಲ್ಲ.
ಅಫ್ಘಾನಿಸ್ತಾನದ ಸ್ಟಾರ್ ಆರಂಭಿಕ ಬ್ಯಾಟರ್ ಇಬ್ರಾಹಿಂ ಝದ್ರಾನ್, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2022ರ ಏಷ್ಯಾಕಪ್‌ನಲ್ಲಿ ರನ್‌ಗಳ ಸುರಿಮಳೆಯನ್ನೇ ಹರಿಸಿದ ಅವರು, 5 ಇನ್ನಿಂಗ್ಸ್‌ಗಳಲ್ಲಿ 65.33 ಸರಾಸರಿಯಲ್ಲಿ 196 ರನ್ ಗಳಿಸಿದ್ದಾರೆ.
2022ರಲ್ಲಿ ಶ್ರೀಲಂಕಾದ ಏಷ್ಯಾಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಭಾನುಕ ರಾಜಪಕ್ಸೆ, ಆಡಿದ 6 ಇನ್ನಿಂಗ್ಸ್‌ಗಳಲ್ಲಿ 47.75ರ ಸರಾಸರಿಯಲ್ಲಿ 191 ರನ್ ಗಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಫೈನಲ್‌ನಲ್ಲಿ 71 ರನ್‌ಗಳೊಂದಿಗೆ ಅವರು ಅಜೇಯರಾಗಿ ಉಳಿದರು,(ಏಜೆನ್ಸೀಸ್).