

Nepalese Citizens: ಸಾಮಾಜಿಕ ಜಾಲತಾಣದ ಮೇಲೆ ನಿಷೇಧ ಹೇರಿದ ನೇಪಾಳ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ಸಾವಿರಾರು ಯುವಜನತೆ, ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ಬ್ಯಾನ್ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಿರುವ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದೆ. ಘಟನೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದ ಬೆನ್ನಲ್ಲೇ ಕರ್ಫ್ಯೂ ಘೋಷಿಸಲಾಗಿದೆ. ಬೃಹತ್ ಪ್ರತಿಭಟನೆಗಳಿಂದಾಗಿ ಕಠ್ಮಂಡುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಕೆಪಿ ಶರ್ಮಾ ಓಲಿ ಸರ್ಕಾರದ ನಿರ್ಧಾರವೇ ಈ ವಿರೋಧ, ಆಕ್ರೋಶಕ್ಕೆ ಕಾರಣವಾಗಿದೆ. ಫೇಸ್‌ಬುಕ್, ಯೂಟ್ಯೂಬ್ ಮತ್ತು ಎಕ್ಸ್ ಸೇರಿದಂತೆ ಒಟ್ಟು 26 ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳನ್ನು ಬ್ಯಾನ್ ಮಾಡಿದ ಕ್ರಮವನ್ನು ನೇಪಾಳದ ಯುವಜನತೆ ಖಂಡಿಸಿದೆ. ಭಾರೀ ಪ್ರತಿಭಟನೆಯ ಹಿನ್ನೆಲೆ ಬನೇಶ್ವರ್, ಸಿಂಘದರ್ಬಾರ್, ನಾರಾಯಣಹಿತಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪೊಲೀಸರು ರಬ್ಬರ್ ಗುಂಡುಗಳು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಗುರುವಾರ (ಸೆ.04) ನೇಪಾಳ ಸರ್ಕಾರವು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳನ್ನು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸದ ಕಾರಣ ಬ್ಯಾನ್ ಮಾಡಲು ಆದೇಶ ಹೊರಡಿಸಿತು. ಆಗಸ್ಟ್ 28ರೊಳಗೆ ನೋಂದಾಯಿಸಿಕೊಳ್ಳಲು ಜಾಲತಾಣಗಳ ದೈತ್ಯರಿಗೆ ಒಂದು ವಾರದ ಕಾಲಾವಕಾಶ ನೀಡಲಾಗಿದೆ ಎಂದು ಸರ್ಕಾರ ಸೂಚನೆಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್), ಆಲ್ಫಾಬೆಟ್ (ಯೂಟ್ಯೂಬ್), ಎಕ್ಸ್ (ಹಿಂದೆ ಟ್ವಿಟರ್), ರೆಡ್ಡಿಟ್ ಮತ್ತು ಲಿಂಕ್ಡ್‌ಇನ್ ಸಂಸ್ಥೆಗಳು ಕೊಟ್ಟ ಗಡುವಿನೊಳಗೆ ಅರ್ಜಿಗಳನ್ನು ಸಲ್ಲಿಸಲಿಲ್ಲ. ಇದೇ ನಿಷೇಧಕ್ಕೆ ಕಾರಣವಾಯಿತು.
ಟಿಕ್‌ಟಾಕ್, ವೈಬರ್, ವಿಟ್ಕ್, ನಿಂಬಜ್ ಮತ್ತು ಪೊಪೊ ಲೈವ್ ಸರ್ಕಾರದಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು ನೇಪಾಳದಲ್ಲಿ ಬಳಕೆಯಲ್ಲಿವೆ. ಟೆಲಿಗ್ರಾಮ್ ಮತ್ತು ಗ್ಲೋಬಲ್ ಡೈರಿಯ ಅರ್ಜಿಗಳನ್ನು ಪ್ರಸ್ತುತ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
'ದಿ ಕಠ್ಮಂಡು ಪೋಸ್ಟ್' ವರದಿಯ ಪ್ರಕಾರ, ನೇಪಾಳದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಸುಮಾರು 13.5 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ಸಂಖ್ಯೆ 3.6 ಮಿಲಿಯನ್ ಎಂದು ತಿಳಿಸಲಾಗಿದೆ. ಬಹುತೇಕರು ತಮ್ಮ ದೈನಂದಿನ ಕೆಲಸಕ್ಕೆ ಇಂತಹ ಸಾಮಾಜಿಕ ಮಾಧ್ಯಮದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೀಗಿರುವಾಗ, ಸೋಷಿಯಲ್ ಮೀಡಿಯಾ ಏಕಾಏಕಿ ಸ್ಥಗಿತಗೊಂಡಿದ್ದು, ಅಲ್ಲಿನ ಜನರನ್ನು ಕೆರಳಿಸಿದೆ. ಈ ವಿಚಾರದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸುವಂತೆ ಒತ್ತಾಯಿಸಿ, ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
"ನಾವೆಲ್ಲರೂ (ಪ್ರತಿಭಟನಾಕಾರರು) ಸೋಷಿಯಲ್ ಮೀಡಿಯಾ ಬ್ಯಾನ್ನಿಂದ ಪ್ರಚೋದನೆಗೆ ಒಳಗಾಗಿದ್ದೇವೆ. ನಾವಿಲ್ಲಿ ಒಟ್ಟಾಗಿ ಸೇರಿರುವುದಕ್ಕೆ ಇದೊಂದೇ ಕಾರಣವಲ್ಲ. ನೇಪಾಳದಲ್ಲಿ ಸಾಂಸ್ಥಿಕಗೊಳಿಸಲಾಗಿರುವ ಭ್ರಷ್ಟಾಚಾರದ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ" ಎಂದು ವಿದ್ಯಾರ್ಥಿನಿ ಯುಜನ್ ರಾಜ್‌ಭಂಡಾರಿ ಸುದ್ದಿ ಸಂಸ್ಥೆ 'AFP'ಗೆ ತಿಳಿಸಿದ್ದಾರೆ.
ಮತ್ತೊಬ್ಬರು ವಿದ್ಯಾರ್ಥಿನಿ ಇಕ್ಷಾಮಾ ತುಮ್ರೋಕ್ ಪ್ರತಿಕ್ರಿಯಿಸಿ, "ಸರ್ಕಾರದ ಸರ್ವಾಧಿಕಾರಿ ಮನೋಭಾವದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ನಾವು ಬದಲಾವಣೆಯನ್ನು ನೋಡಲು ಬಯಸುತ್ತಿದ್ದೇವೆ. ಈ ಹಿಂದಿನವರು ಇದನ್ನು ಸಹಿಸಿಕೊಂಡಿರಬಹುದು. ಆದರೆ, ಇದೆಲ್ಲವೂ ನಮ್ಮ ಪೀಳಿಗೆಯೊಂದಿಗೆ ಕೊನೆಗಾಣಬೇಕು" ಎಂದಿದ್ದಾರೆ,(ಏಜೆನ್ಸೀಸ್).