

ಲಖನೌ: ಕೋಳಿ ಸಾರು ಮಾಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಹೆಂಡತಿ ಜೊತೆ ಗಂಡ ಜಗಳವಾಡಿಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದ್ದು ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಪವನ್ ತನಗಾಗಿ ಕೋಳಿ ಸಾರು ಮಾಡುವಂತೆ ತನ್ನ ಪತ್ನಿಗೆ ಹೇಳಿದ್ದಾನೆ. ಇದಕ್ಕೊಪ್ಪದ ಆತನ ಮಡದಿ ಮನೆಯಲ್ಲಿ ಅಡುಗೆ ಸಿದ್ದಪಡಿಸಿರುವುದಾಗಿ ತಿಳಿಸಿದ್ದಾಳೆ.
ಶೀಘ್ರವೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದಂಪತಿಗಳಿಬ್ಬರ ನಡುವೆ ಹೊಡೆದಾಟವಾಗಿದ್ದು ಈ ವೇಳೆ ಪತ್ನಿ ಬೇರೊಂದು ಕೋಣೆಗೆ ಹೋಗಿ ಮಲಗಿದ್ದಾಳೆ. ಇದಾದ ಕೆಲವೇ ಕ್ಷಣಗಳ ಬಳಿಕ ಪವನ್ ನೇಣಿಗೆ ಶರಣಾಗಿರುವುದ ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪವನ್ ಸಹೋದರ ಗಲಾಟೆ ಬಳಿಕ ದಂಪತಿಗಳಿಬ್ಬರು ಪ್ರತ್ಯೇಕ ಕೋಣೆಗೆ ತೆರಳಿದ್ದರು. ಈ ವೇಳೆ ನನ್ನ ಸಹೋದರ ತುಂಬಾ ಹೊತ್ತಾದರೂ ರೂಮಿನ ಬಾಗಿಲನ್ನು ತೆರದಿರಲಿಲ್ಲ ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದಾಗ ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.