ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ, ಮಿಸ್ಟರ್ ಸಿದ್ದರಾಮಯ್ಯ ಧೈರ್ಯವಿದ್ದರೆ ತನಿಖೆ ನಡೆಸಿ: ಎಚ್​ಡಿಕೆ ಸವಾಲು

HDk
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವನೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷವು ಮತದಾರರಿಗೆ ತಲಾ 5,000 ಸಾವಿರ ರೂಪಾಯಿ ಮೌಲ್ಯದ ಕೂಪನ್​ಗಳನ್ನು ಹಂಚಿ ಗೆದ್ದಿದೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಜೆಡಿಎಸ್​ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಕೆ ಕಾಂಗ್ರೆಸ್​ ವಿರುದ್ಧ ಸರಣಿ ಆರೋಪಗಳನ್ನು ಮಾಡುವ ಮೂಲಕ ಹರಿಹಾಯ್ದಿದ್ದಾರೆ.

ಅಕ್ರಮ ಎಸಗಿದ್ದಾರೆ

ಮತದಾನ ನಡೆಯುವ ಮುನ್ನಾ ದಿನ ಕಾಂಗ್ರೆಸ್​ ಅಭ್ಯರ್ಥಿಗಳು ಮತದಾರರಿಗೆ ಕೂಪನ್​ಗಳನ್ನು ಹಂಚಿದ್ದಾರೆ. ರಾಮನಗರ, ಮಾಗಡಿ,ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ 45ರಿಂದ 50 ವಿಧಾನಸಭೆ ಕ್ಷೇತ್ರಗಳಲ್ಲಿಈ ರೀತಿಯ ಅಕ್ರಮವನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂ ಆರ್ ಕೋಡ್​ಗಳು ಉಳ್ಳ ಈ ಕೂಪನ್​ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ದೂರಿದ್ದಾರೆ.

ಮೂರು ಸಾವಿರ ಹಾಗೂ ಐದು ಸಾವಿರ ಮೊತ್ತದ ಕ್ಯೂ ಆರ್ ಕೋಡ್​ಗಳನ್ನು ಹೊಂದಿರುವ ಕೂಪನ್​ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು. ಈ ಕೂಪನ್ ಗಳಿಂದಲೇ ನಾವು ಸೋಲಬೇಕಾಯಿತು. ಕಾಂಗ್ರೆಸ್ ಅಕ್ರಮವಾಗಿ ಗೆದ್ದಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೀರಾ ಮಿಸ್ಟರ್ ಸಿದ್ದರಾಮಯ್ಯ ಎಂದು ಹರಿಹಾಯ್ದಿದ್ದಾರೆ.

ಹಣ ಎಲ್ಲಿಂದ ತಂದರು?

ಹೀಗೆ ಕೂಪನ್​ಗಳನ್ನು ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಹಣ ಎಲ್ಲಿಂದ ತಂದರು? ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಅಂಗಡಿಗೆ ಹೋಗಿ ಕೂಪನ್ ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಲಾಗಿದೆ. ಇದು ಚುನಾವಣೆಯಲ್ಲಿ ನಡೆದಿರುವ ಮಹಾ ಅಕ್ರಮ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಗೆಲವು ಗೆಲವೇ. ಆದರೆ, ಮಹಾತ್ಮ ಗಾಂಧೀಜಿ ಹೆಸರು ಹೇಳುವ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಅತ್ಯಂತ ಕೀಳು ಕೆಲಸ ಮಾಡಿದೆ. ಆ ಪಕ್ಷಕ್ಕೆ ನೈತಿಕತೆ ಎನ್ನುವುದು ಇದೆಯಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಬಗ್ಗೆ ಕಾಂಗ್ರೆಸ್ ಒಂದು ಟ್ವೀಟ್ ಮಾಡಿದೆ.ಗ್ಯಾರಂಟಿ ಕಾರ್ಯಕ್ರಮಗಳನ್ನು ಈಡೇರಿಸುವುದು ಇರಲಿ, ನೀವು ಪಕ್ಷ ವಿಸರ್ಜನೆ ಯಾವಾಗ ಮಾಡ್ತೀರಾ ಅಂತಾ ಕೇಳಿದೆ. ಹಿಂದೆ ಒಂದು ಚುನಾವಣೆಯಲ್ಲಿ 179 ಸ್ಥಾನದಿಂದ 39 ಸ್ಥಾನಕ್ಕೆ ಇಳಿದಾಗ ಕಾಂಗ್ರೆಸ್ ನಾಯಕರು ಪಕ್ಷ ವಿಸರ್ಜನೆ ಮಾಡಿದ್ದಾರ? ಕಾಲಚಕ್ರ ತಿರುಗುತ್ತೆ, ಮೇಲೆ ಇದ್ದವನು ಕೆಳಗೆ ಇಳಿಬೇಕು, ಕೆಳಗಿದ್ದವನು ಮೇಲೆ ಬರಬೇಕು. ಈ ದುರಹಂಕಾರದ ಮಾತು ಬೇಡ. ಪಕ್ಷ ವಿಸರ್ಜನೆ ಮಾಡುವುದು, ಅಂತ್ಯಸಂಸ್ಕಾರ ಮಾಡುವುದು ಇದೆಲ್ಲಾ ನಾನು ನಿಮ್ಮಿಂದ ಕಲೀಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

HDk

ನಾನು ಹೇಳಿದ್ದೇನು?

ನನಗೆ 123 ಸೀಟು ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ. ಆ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬೇರೆ ರೀತಿ ಕೇಳಿಸಿದೆ. ಒಮ್ಮೆ ಅವರು ನನ್ನ ಹೇಳಿಕೆಯನ್ನು ಮತ್ತೆ ಕೇಳಿಸಿಕೊಳ್ಳಲಿ. ನಾನು ಹೇಳಿದ್ದು ಏನು ಎಂಬುದು ಅರ್ಥ ಆಗುತ್ತದೆ. ಅವರಂಥ ಕುತಂತ್ರದ ರಾಜಕಾರಣ ಮಾಡಿ, ನಾವು ಪಕ್ಷ ಕಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಗೆದ್ದರು ಅನ್ನೋದಕ್ಕಿಂತ ಒಟ್ಟಾರೆ ಗೆದ್ದರು ಅನ್ನುವುದೇ ಮುಖ್ಯ. ಈ ನಾಡಿನ ಜನರ ಮುಂದೆ ಮನವಿ ಮಾಡ್ತೀನಿ. ಒಪ್ಪತ್ತು ಹೊತ್ತಿನ ಊಟದ ಆಸೆಗೆ ನಿಮ್ಮ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳವೇಡಿ. ಒಂದೆರಡು ಸಾವಿರ ಹಣದಿಂದ ನಿಮ್ಮ ಬದುಕು ಸರಿ ಹೋಗುವುದಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಇಬ್ರಾಹಿಂ-ನಿಖಿಲ್ ಮುಂದುವರಿಕೆ

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್​ ಕುಮಾರಸ್ವಾಮಿ ಮುಂದುವರಿಯುತ್ತಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಈ ಇಬ್ಬರು ರಾಜೀನಾಮೆ ನೀಡಿದ್ದಾರೆ.

ಅವರನ್ನು ಮುಂದುವರೆಸಬೇಕಾ, ಬೇಡವಾ ಅಂತ ನಾವು ನಿರ್ಧಾರ ಮಾಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಆದರೆ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

hdk siddaramaiah

ಮಾತು ತಪ್ಪಿದ್ದಾರೆ

ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೆ ತರುವುದು ಕಷ್ಟ. ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದವವರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯ ಇಲ್ಲ. ಸಿದ್ದರಾಮಯ್ಯ ಅವರು ಚುನಾವಣೆಗೆ ಮುನ್ನ ಭಾಷಣದಲ್ಲಿ ಎಲ್ಲರಿಗೂ ಫ್ರೀ ಅಂತಾ ಹೇಳ್ತಾ ಇದ್ದರು. ಬಸ್ ಪಾಸ್ ಎಲ್ಲಾ ಕಡೆ ಫ್ರೀ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳನ್ಹು ಜಾರಿ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ, ಅವರು ಮಾತು ತಪ್ಪಿದ್ದಾರೆ. 200 ಯೂನಿಟ್​ವರೆಗಿನ ವಿದ್ಯುತ್​​ ಬಿಲ್​ಅನನ್ಉ ಯಾರು ಕಟ್ಟಬೇಡಿ, ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಟಿಕೆಟ್​ ಪಡೆಯಬೇಡಿ.

ಈ ವಿಚಾರದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನ ಏನು ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ. ನಾವಂತೂ ಹೋರಾಟ ಮಾಡಲು ಸಿದ್ದ.‌ ಜನರಿಗೆ ತಮಗೆ ಅನ್ಯಾಯ ಆಗಿದೆ ಎಂದರೆ ನಮ್ಮ ಜತೆ ಕೈಜೋಡಿಸಲಿ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net