ಬಿಲ್​ ಕಟ್ಟಿಲ್ಲ ಪವರ್​ ಕಟ್! ಬಡ ಕೂಲಿ ಕಾರ್ಮಿಕನಿಗೆ 11 ಕೋಟಿ ರೂ. ತೆರಿಗೆ ಬರೆ, ಡಬಲ್​ ಶಾಕ್​ಗೆ ಕುಟುಂಬ ಕಂಗಾಲು | Tax Notice

ವಿಜಯವಾಣಿ - 2025-04-01T212258.461
Published on

Tax Notice: ಮನೆಯ ವಿದ್ಯುತ್​ ಬಿಲ್​ ಕಟ್ಟಿಲ್ಲ ಎಂಬ ಒಂದೇ ಒಂದು ಸಣ್ಣ ಕಾರಣಕ್ಕೆ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಬೆನ್ನಲ್ಲೇ, ಬಡ ಕೂಲಿ ಕಾರ್ಮಿಕನ ಕುಟುಂಬಕ್ಕೆ ಒಂದಲ್ಲ, ಎರಡು ಶಾಕ್​ಗಳು ಎದುರಾಗಿವೆ. ಇದು ಕುಟುಂಬಸ್ಥರನ್ನು ಕಂಗಾಲಾಗಿಸಿದೆ.

ಪತ್ನಿಗೆ ಕ್ಷಯರೋಗ

ಕ್ಷಯರೋಗದಿಂದ ಬಳಲುತ್ತಿರುವ ಪತ್ನಿ ಮನೆಯಲ್ಲಿ ತೀವ್ರ ಪರದಾಡುತ್ತಿದ್ದರೆ, ಇತ್ತ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 11 ಕೋಟಿ ರೂ. ಮೊತ್ತದ ತೆರಿಗೆ ಬಾಕಿ ಇದೆ ಎಂಬ ನೋಟಿಸ್ ಅನ್ನು ಜಾರಿಗೊಳಿಸಿದ್ದಾರೆ. ಈ ರೀತಿಯ ನೋಟಿಸ್​ ಉತ್ತರ ಪ್ರದೇಶ ಜಿಲ್ಲೆಯ ಮೂವರು ಜನರಿಗೆ ಬಂದಿದ್ದು. ಈತ ಕೂಡ ಅವರಲ್ಲಿ ಒಬ್ಬ ಎನ್ನಲಾಗಿದೆ. ಕತ್ತಲೆಯಲ್ಲಿದ್ದ ತಮ್ಮ ಮನೆಯ ಮುಂದೆ ನಿಂತು ಅಸಹಾಯಕನಾಗಿ ನಿಂತಿದ್ದ ವ್ಯಕ್ತಿ ಯೋಗೇಶ್ ಶರ್ಮ, ಬೀಗಗಳಿಗೆ ಬಳಸುವ ಸ್ಪ್ರಿಂಗ್‌ಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುವ ಓರ್ವ ಬಡ ಕೂಲಿ ಕಾರ್ಮಿಕ. ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಈಗಾಗಲೇ ತೀರ ಹದಗೆಟ್ಟಿದ್ದು, ಇದರ ಮಧ್ಯೆಯೇ ದೊಡ್ಡ ಆಘಾತ ಎದುರಾಗಿದೆ.

ಒಂದೆಡೆ ಮನೆಯಲ್ಲಿ ಕರೆಂಟ್ ಇಲ್ಲ ಎಂಬ ಬೇಸರ ಕಾಡುತ್ತಿದ್ದರೆ, ಮತ್ತೊಂದೆಡೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ 11 ಕೋಟಿ ರೂ. ನೋಟಿಸ್ ನೋಡಿ ಯೋಗೇಶ್ ಅಕ್ಷರಶಃ​ ತತ್ತರಿಸಿ ಹೋಗಿದ್ದಾರೆ. ಕರೆಂಟ್​ ಬಿಲ್​ ಕಟ್ಟಲು ಸಾಧ್ಯವಾಗದ ನಾವು, ಇಷ್ಟೊಂದು ಹಣ ಎಲ್ಲಿಂದ ತರುವುದು ಎಂಬ ಚಿಂತೆಯಲ್ಲಿ ತೊಡಗಿದ್ದಾರೆ. ಈ ಸುದ್ದಿ ತಿಳಿದ ಕಾರ್ಮಿಕ ಯೋಗೇಶ್​ ಪತ್ನಿ, ತಿಂಡಿ-ಊಟ ಮಾಡುವುದನ್ನೇ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಯೋಗೇಶ್​ ಜತೆಗೆ ಓರ್ವ ಜ್ಯೂಸ್ ಮಾರಾಟಗಾರ ಮತ್ತು ಕ್ಲೀನರ್​ಗೂ ಸಹ ಇದೇ ರೀತಿಯ ನೋಟಿಸ್​ ಬಂದಿದೆ ಎನ್ನಲಾಗಿದೆ.

ಅತ್ತ ವಿದ್ಯುತ್​ ಇಲ್ಲ, ಇತ್ತ ತೆರಿಗೆ ನೋಟಿಸ್​

ಈ ಬಗ್ಗೆ ಮಾತನಾಡಿದ ಯೋಗೇಶ್​, "ಮಾರ್ಚ್ 20ರಂದು ನೋಟಿಸ್ ಬರೆಯಲಾಗಿದ್ದು, ನಾನು ಆದಾಯ ತೆರಿಗೆ ಇಲಾಖೆಗೆ 11.12 ಕೋಟಿ ರೂ. (11,11,85,991 ರೂ.) ಮೊತ್ತ ಬಾಕಿ ಉಳಿಸಿರುವುದಾಗಿ ಹೇಳಲಾಗಿದೆ. ನನ್ನ ಜೀವನದಲ್ಲಿ ಇಷ್ಟೊಂದು ದುಬಾರಿ ಮೊತ್ತದ ಬಗ್ಗೆ ಕೇಳಿಯೇ ಇಲ್ಲ. ಬಿಲ್ ಸಹ ಹೇಗಿರುತ್ತದೆ ಎಂದು ನೋಡಿಲ್ಲ. ನೋಟಿಸ್ ಪಡೆದ ತಕ್ಷಣ ನಾನು ಮತ್ತು ನನ್ನ ಹೆಂಡತಿ ಸರಿಯಾಗಿ ಊಟ ಮಾಡಿಲ್ಲ. ಇರುವುದು ಬಾಡಿಗೆ ಸೂರಿನಲ್ಲಿ. ಮನೆಯ ಕರೆಂಟ್​ ಬಿಲ್ ಪಾವತಿಸಿಲ್ಲ ಎಂದು ವಿದ್ಯುತ್ ಇಲಾಖೆಯವರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ಈಗ ಇದು ಬೇರೆ" ಎಂದು ಅಳಲು ತೋಡಿಕೊಂಡಿದ್ದಾರೆ.

ನಂಬಲು ಅಸಾಧ್ಯ

"ಜೀವನದಲ್ಲಿ ಇಷ್ಟು ಹಣ ಎಂದೂ ನೋಡಿಲ್ಲ ಎಂದ ಜ್ಯೂಸ್​ ವ್ಯಾಪಾರಿ ಮೊಹಮ್ಮದ್ ರಯೀಸ್, ನನಗೆ 7.8 ಕೋಟಿ ರೂ. (7,79,02,457) ನೋಟಿಸ್ ಬಂದಿದೆ.ಈ ನೋಟಿಸ್ ಏಕೆ ಕೊಟ್ಟಿದ್ದಾರೆ ಅಂತ ಈಗಲೂ ಗೊತ್ತಿಲ್ಲ. ನಾನು ಜ್ಯೂಸ್ ಮಾತ್ರ ಮಾರಾಟ ಮಾಡ್ತೀನಿ. ಹೀಗಿರುವಾಗ ಇಷ್ಟೊಂದು ಹಣ ಹೇಗೆ ಅನ್ನೋದು ಅನುಮಾನ ಮೂಡಿದೆ. ಈಗ ನಾನು ಏನು ಮಾಡಬೇಕು ಗೊತ್ತಿಲ್ಲ? ನಾನು ಐ-ಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅವರು ನನ್ನ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಅಸಲಿಗೆ ಆ ರೀತಿ ಏನೂ ಆಗಿಲ್ಲ" ಎಂದಿದ್ದಾರೆ.ಈ ಬಗ್ಗೆ ಮಾತನಾಡಿದ ರಯೀಸ್ ಸ್ನೇಹಿತ, "ಆತ ಕೋಟ್ಯಾಧಿಪತಿಯಾಗಿದ್ದರೆ, ಮೂಲೆ ಅಂಗಡಿಯಲ್ಲಿ ಜ್ಯೂಸ್ ಏಕೆ ನಡೆಸುತ್ತಿದ್ದ ಹೇಳಿ? ಇದು ಖಂಡಿತವಾಗಿಯೂ ವಂಚನೆಯ ಪ್ರಕರಣ" ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net