

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.೧೦ರಿಂದ ೨೦ರವರೆಗೆ ನಡೆಯುವ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಗೊನೆ ಮುಹೂರ್ತ ನಡೆಯಿತು.
ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ವಾದ್ಯಗೋಷ್ಠಿಯೊಂದಿಗೆ ತೆರಳಿ ಪ್ರಧಾನ ಅರ್ಚಕ ವಿ.ಎಸ್. ಭಟ್ ಗೊನೆ ಮುಹೂರ್ತ ನಡೆಸಿದರು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು. ರಥಬೀದಿಯ ಮೂಲಕ ದೇವಸ್ಥಾನಕ್ಕೆ ಗೊನೆಯನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಈಶ್ವರ ಬೇಡೆಕರ್, ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ದಿನೇಶ್ ಕುಲಾಲ್, ಮಹಾಬಲ ಶೆಟ್ಟಿ, ನಳಿನಿ ಪಿ.ಶೆಟ್ಟಿ, ಕಾರ್ಯ ನಿರ್ವಹಣಾಽಕಾರಿ ಶ್ರೀನಿವಾಸ್ ಕೆ.ವಿ., ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಪುಷ್ಕರಣಿ ಸಮೀಪ ನಿರ್ಮಿಸಿದ ಅನ್ನಛತ್ರದಲ್ಲಿ ೧೦ ಸಾವಿರ ಮಂದಿಗೆ ಏಕಕಾಲದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಹೊತ್ತು ಯಾರೂ ಕಾಯುವಂತೆ ಆಗಬಾರದೆಂಬ ನಿಟ್ಟಿನಲ್ಲಿ ಕೌಂಟರ್ಗಳನ್ನು ಹಾಕಲಾಗಿದೆ. ಮಕ್ಕಳು, ಹಿರಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಕುಳಿತು ಊಟ ಮಾಡುವುದಕ್ಕೂ ವ್ಯವಸ್ಥೆಯಿದೆ. ದೇವಸ್ಥಾನದ ಒಳಗೆ ಪ್ರಸಾದ ಸ್ವೀಕಾರಕ್ಕೂ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಮುಂಭಾಗದ ಗದ್ದೆಯನ್ನು ಶುಚಿಗೊಳಿಸಿ, ಜನರಿಗೆ ಓಡಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ತಿಂಗಳಿಗೆ ೩೦ ಲಕ್ಷ ಆದಾಯವಿದ್ದರೆ, ಖರ್ಚು ಅದಕ್ಕಿಂತ ಹೆಚ್ಚಿದೆ. ಹೆಚ್ಚಿನ ಭಕ್ತರು ಬಂದಾಗ ಆರ್ಥಿಕ ಕ್ರೋಡೀಕರಣವಾಗುತ್ತದೆ. ದೇವಸ್ಥಾನದ ಜೀರ್ಣೋದ್ಧಾರವನ್ನು ೫೦ ಕೋಟಿ ವೆಚ್ಚದಲ್ಲಿ ಮಾಡಬೇಕೆಂದಿದ್ದು, ಅದಕ್ಕೆ ಉದ್ಯಮಿಗಳನ್ನು ಸೇರಿಸಿಕೊಂಡು ಸಮಿತಿ ರಚಿಸಲಾಗುವುದು.
| ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು
ಜಾತ್ರೆಯ ಸಮಯದಲ್ಲಿ ವಿಶೇಷವಾಗಿ ಶಿವಪೂಜೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಏ.೩ರಂದು ನಟರಾಜ್ ವೇದಿಕೆಯಲ್ಲಿ ಅಂಗಡಿ ಏಲಂ ಪ್ರಕ್ರಿಯೆ ನಡೆಯಲಿದ್ದು, ೨ರಂದು ಏಲಂ ನಿಲ್ಲುವವರು ನೋಂದಾಯಿಸಿಕೊಳ್ಳಬಹುದಾಗಿದೆ. ಉಳ್ಳಾಲ್ತಿ ಭಂಡಾರ ಆಗಮನವಾಗಿ ದೇವರ ಮುಖಾಮುಖಿಯಾಗುವ ಸಮಯದಲ್ಲಿ ವಿಶೇಷ ಸುಡುಮದ್ದಿನ ವ್ಯವಸ್ಥೆಯನ್ನು ಕಾರ್ಕಳದವರು ಮಾಡಲಿದ್ದಾರೆ. ಸಿಡಿಮದ್ದಿಗಾಗಿ ಟೆಂಡರ್ ಮೂಲಕ ೮ ಲಕ್ಷದಷ್ಟು ಖರ್ಚು ಮಾಡಲಾಗುತ್ತಿದ್ದು, ಈ ಬಾರಿ ಭಕ್ತರಿಂದ ಹಣ ಸಂಗ್ರಹಿಸಿ ದೇವಸ್ಥಾನಕ್ಕೆ ಉಳಿತಾಯ ಮಾಡಲಾಗುತ್ತಿದೆ. ೧೩೫ ಬ್ರಹ್ಮರಥ ಸೇವೆ ಈಗಾಗಲೇ ನಿಗದಿಯಾಗಿದ್ದು, ೨೦೦ರಷ್ಟು ಆಗಬಹುದೆಂಬ ನಿರೀಕ್ಷೆಯಿದೆ.
| ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ