

Spying for Pakistan : ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧನ ಮಾಡಿದೆ.
ಬಂಧಿತನನ್ನು ರಾಂಪುರ ಜಿಲ್ಲೆಯ ನಿವಾಸಿ ಶೆಹಜಾದ್ ಎಂದು ಗುರುತಿಸಲಾಗಿದೆ. ಈತನನ್ನು ಶನಿವಾರ (ಮೇ 18) ಮೊರಾದಾಬಾದ್ನಿಂದ ವಶಕ್ಕೆ ಪಡೆಯಲಾಗಿದೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳಿಗೆ ಕೆಲವರು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ದೇಶಾದ್ಯಂತ ನಡೆದ ದಾಳಿಯ ಮಧ್ಯೆ ಶೆಹಜಾದ್ನನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಿಂದ ಈಗಾಗಲೇ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಯೂಟ್ಯೂಬರ್ಗಳು ಸೇರಿದಂತೆ ಹಲವಾರು ಜನರನ್ನು ಬಂಧಿಸಲಾಗಿದೆ.
ಎಟಿಎಸ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಇಸ್ಲಾಮಾಬಾದ್ನ ಗುಪ್ತಚರ ಸಂಸ್ಥೆಯ ಅಡಿಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಆರೋಪಿ ಶೆಹಜಾದ್, ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಬಳಿಕ ಆತನ ಮೇಲೆ ಕಣ್ಗಾವಲು ಇಡಲಾಗಿತ್ತು. ಆತ ಪಾಕಿಸ್ತಾನಕ್ಕೆ ಹಲವು ಬಾರಿ ಪ್ರಯಾಣಿಸಿರುವುದು ಮತ್ತು ಗಡಿಯಾಚೆ ಸೌಂದರ್ಯವರ್ಧಕಗಳು, ಬಟ್ಟೆ, ಮಸಾಲೆಗಳು ಮತ್ತು ಇತರ ಸರಕುಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ. ಕಳ್ಳಸಾಗಣೆ ದಂಧೆಯು ಆತನ ಬೇಹುಗಾರಿಕೆ ಚಟುವಟಿಕೆಗಳಿಗೆ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶೆಹಜಾದ್ ಹಲವಾರು ಐಎಸ್ಐ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಸಾಧಿಸಿ, ಅವರಿಗೆ ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಪೂರೈಸಿದ ಆರೋಪವೂ ಇದೆ. ಆರೋಪಿ ಗುಪ್ತಚರ ಮಾಹಿತಿಯನ್ನು ರವಾನಿಸುವುದಲ್ಲದೆ, ಭಾರತದೊಳಗೆ ಐಎಸ್ಐ ಕಾರ್ಯಾಚರಣೆಗಳಿಗೆ ಸಹಕರಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಸ್ಐ ಸೂಚನೆಗಳ ಮೇರೆಗೆ ಆರೋಪಿ ಶೆಹಜಾದ್, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಿ ಏಜೆಂಟರಿಗೆ ಹಣವನ್ನು ವರ್ಗಾಯಿಸಿರುವುದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ. ಐಎಸ್ಐ ಸಂಬಂಧಿತ ಚಟುವಟಿಕೆಗಳಿಗೆ ಜನರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ರಾಂಪುರ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಜನರನ್ನು ಕಳ್ಳಸಾಗಣೆ ನೆಪದಲ್ಲಿ ಪಾಕಿಸ್ತಾನಕ್ಕೆ ಕಳುಹಿಸಲು ಶೆಹಜಾದ್ ಸಹಾಯ ಮಾಡಿರುವ ಆರೋಪ ಇದೆ. ಕಳ್ಳಸಾಗಾಣೆ ಮಾಡಲಾದ ವ್ಯಕ್ತಿಗಳಿಗೆ ವೀಸಾ ಮತ್ತು ಪ್ರಯಾಣದ ದಾಖಲೆಗಳನ್ನು ಐಎಸ್ಐ ಕಾರ್ಯಕರ್ತರ ಸಹಾಯದಿಂದ ಶೆಹಜಾದ್ ವ್ಯವಸ್ಥೆ ಮಾಡಿದ್ದಾನೆಂದು ವರದಿಯಾಗಿದೆ.
ಶೆಹಜಾದ್ ಭಾರತೀಯ ಸಿಮ್ ಕಾರ್ಡ್ಗಳನ್ನು ಐಎಸ್ಐ ಏಜೆಂಟ್ಗಳಿಗೆ ಖರೀದಿಸಿ ತಲುಪಿಸಿದ್ದಾನೆ ಎಂದು ಹೇಳಲಾಗಿದ್ದು, ಇದು ವಿಧ್ವಂಸಕ ಉದ್ದೇಶಗಳಿಗಾಗಿ ಸಂವಹನಕ್ಕೆ ಸಹಾಯ ಮಾಡಿದೆ ಎನ್ನಲಾಗಿದೆ. ಆರೋಪಿ ಶೆಹಜಾದ್ ವಿರುದ್ಧ ಲಖನೌ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 148 ಮತ್ತು 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ. (ಏಜೆನ್ಸೀಸ್)