

Tax Notice : 2024-25ನೇ ಸಾಲಿನ ಹಣಕಾಸು ವರ್ಷ ಮುಗಿಯುತ್ತಿದ್ದಂತೆ ಎಲ್ಲರೂ ತೆರಿಗೆ ಪಾವತಿಸಬೇಕಿದೆ. ಹೀಗಾಗಿ ಅನೇಕರಿಗೆ ತೆರಿಗೆ ಇಲಾಖೆಯಿಂದ ನೋಟಿಸ್ಗಳು ರವಾನೆಯಾಗುತ್ತಿದೆ. ಅಂದಹಾಗೆ ಕೋಟ್ಯಂತರ ರೂಪಾಯಿ ವಹಿವಾಟ ನಡೆಸುವವರಿಗೆ ತೆರಿಗೆ ನೋಟಿಸ್ ಕೊಡುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಅಲಿಘಡ ಮೂಲದ ಜ್ಯೂಸ್ ಮಾರಾಟಗಾರನೊಬ್ಬ ತನಗೆ ಬಂದ ತೆರಿಗೆ ನೋಟೀಸ್ ನೋಡಿ ಶಾಕ್ ಆಗಿದ್ದಾನೆ. ಈ ಸುದ್ದಿ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಲಿಗಢದ ಮೊಹಮ್ಮದ್ ರಹೀಸ್, ಜ್ಯೂಸ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಾರ್ಚ್ 18 ರಂದು ಆದಾಯ ತೆರಿಗೆ ಇಲಾಖೆ ಅವರಿಗೆ ತೆರಿಗೆ ನೋಟಿಸ್ ಕಳುಹಿಸಿದೆ. ಅದರಲ್ಲಿ ಅವರು 7.79 ಕೋಟಿ ರೂ. ತೆರಿಗೆ ಪಾವತಿಸಬೇಕಾಗಿದೆ. ಅಲ್ಲದೆ, ಮಾರ್ಚ್ 28 ರೊಳಗೆ ನೋಟಿಸ್ಗೆ ಉತ್ತರ ನೀಡಬೇಕಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ರಹೀಸ್ಗೆ ಏನು ಮಾಡಬೇಕೆಂದು ತೋಚುತ್ತಿಲ್ಲ.
ಇದಾದ ಬಳಿಕ ರಯೀಸ್, ತನಗೆ ಬಂದಿರುವ ಬೃಹತ್ ತೆರಿಗೆ ನೋಟೀಸ್ ಬಗ್ಗೆ ತಿಳಿದುಕೊಳ್ಳಲು ತನ್ನ ಸ್ನೇಹಿತರನ್ನು ಸಂಪರ್ಕಿಸಿದರು. ಈ ವೇಳೆ ಅವರು ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಲು ಸಲಹೆ ನೀಡಿದರು. ನಂತರ ತೆರಿಗೆ ಅಧಿಕಾರಿಗಳ ಬಳಿ ನೋಟಿಸ್ ತೆಗೆದುಕೊಂಡು ಹೋಗಿ ತೋರಿಸಿದಾಗ, ಅದನ್ನು ನೋಡಿದ ಅಧಿಕಾರಗಳೇ ಆಶ್ಚರ್ಯಚಕಿತರಾಗಿದ್ದಾರೆ.
ಅಂದಹಾಗೆ, ರಹೀಸ್ ಅವರು ದಿನಕ್ಕೆ ಕೇವಲ 500 ರಿಂದ 600 ರೂಪಾಯಿ ಗಳಿಸುತ್ತಾರೆ ಮತ್ತು ಅವರದು ಸಣ್ಣ ಪ್ರಮಾಣದ ವಹಿವಾಟುಗಳಾಗಿವೆ. ಇನ್ನು ಈ ನೋಟಿಸ್ ಏಕೆ ಬಂತು ಗೊತ್ತಿಲ್ಲ ಎಂದು ರಹೀಸ್ ಹೇಳಿದ್ದಾರೆ. ಯಾರೋ ರಹೀಸ್ ಅವರ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಇದೀಗ ದೂರು ನೀಡಿರುವ ರಹೀಸ್, ತನ್ನ ವೈಯಕ್ತಿಕ ಡೇಟಾವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಪರಾಧಿಗಳನ್ನು ಶಿಕ್ಷಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)