ಪತ್ರಕರ್ತನನ್ನು ಬೆನ್ನಟ್ಟಿ ಗುಂಡು ಹಾರಿಸಿ ಕೊಲೆಗೈದ ದುಷ್ಕರ್ಮಿಗಳು: ಹತ್ಯೆಗೆ ಕಾರಣ ಆ ಒಂದು ಘಟನೆ

Journalist
Published on

ಬಲಿಯಾ: ಮೂವರು ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಬೆನ್ನಟ್ಟಿ ಹೋಗಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಸ್ಥಳೀಯ ಪತ್ರಕರ್ತ ರತನ್​ ಸಿಂಗ್​ (42) ಮೃತ ದುರ್ದೈವಿ. ಆಸ್ತಿ ವಿವಾದವೇ ಕೊಲೆ ಕಾರಣ ಎಂದು ತಿಳಿದುಬಂದಿದ್ದು, ಗುಂಡು ಹಾರಿಸಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಧಾನಿ ಲಖನೌದಿಂದ 260 ಕಿ.ಮೀ ದೂರವಿರುವ ಪೂರ್ವ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ರತನ್​ ಸಿಂಗ್​ ಸ್ಥಳೀಯ ಖಾಸಗಿ ನ್ಯೂಸ್​ ಚಾನೆಲ್​ನಲ್ಲಿ ಕೆಲಸ ಮಾಡುತ್ತಿದ್ದರು.

ಬಲಿಯಾ ಜಿಲ್ಲೆಯ ನಗರ ಭಾಗದಲ್ಲಿ ಸಿಂಗ್ ನೆಲೆಸಿದ್ದರು.​ ಇವರ ಕುಟುಂಬ ಮಾತ್ರ ಹಳ್ಳಿಯಲ್ಲಿಯೇ ವಾಸಿಸುತ್ತಿತ್ತು. ಅಲ್ಲದೆ, ಆರೋಪಿಯೊಂದಿಗೆ ಕಳೆದ ಕೆಲ ವರ್ಷಗಳಿಂದ ಜಮೀನು ವಿವಾದದಲ್ಲಿ ಸಿಲುಕಿತ್ತು. ವಿವಾದ ಸಂಬಂಧ ಮಾತನಾಡಲು ತಮ್ಮ ಹಳ್ಳಿ ತೆರಳುವಾಗ ಬೆನ್ನಟ್ಟಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಳ್ಳಲು ಸಿಂಗ್​ ಯತ್ನಿಸಿದಾದರೂ ಸಫಲವಾಗದೇ ಗುಂಡಿನ ದಾಳಿಗೆ ಸಿಂಗ್​ ಪ್ರಾಣ ಬಿಟ್ಟಿದ್ದಾರೆ.

ಆರೋಪಿ ಜಮೀನಿನ ಸುತ್ತ ಗೋಡೆಯೊಂದನ್ನು ನಿರ್ಮಿಸಿದ್ದ. ಇದನ್ನು ತಿಳಿದಿದ್ದ ಸಿಂಗ್ ಗೋಡೆಯನ್ನು ತೆರವುಗೊಳಿಸಿದ್ದರು. ಈ ವೇಳೆ ಆರೋಪಿ ಹಾಗೂ ಸಿಂಗ್​​ ನಡುವೆ ಮಾತಿನ ಚಕಮಕಿಯು ನಡೆದಿತ್ತು. ಇದೇ ದ್ವೇಷದಲ್ಲಿ ಸಿಂಗ್​ರನ್ನು ನಿನ್ನೆ ರಾತ್ರಿ ಬೆನ್ನಟ್ಟಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಅಜಾಮ್​ಗಢ ವಲಯದ ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.​ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net