ನೆಪ ಹೇಳಿ ಮನೆಗೆ ನುಗ್ಗಿ ಹಾಡಹಗಲೇ ದಂತ ವೈದ್ಯೆಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ರಾಜ್ಯದ ಜನತೆ

Nisha Singah;
Published on

ಆಗ್ರಾ: ಸೆಟ್​ ಟಾಪ್​ ಬಾಕ್ಸ್​ ರೀಚಾರ್ಜ್​ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ 38 ವರ್ಷದ ದಂತ ವೈದ್ಯೆಯನ್ನು ಹಾಡಹಗಲಲ್ಲೇ ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಡಾ. ನಿಶಾ ಸಿಂಘಾಲ್​ ಕೊಲೆಯಾದ ದಂತ ವೈದ್ಯೆ.​ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿ ನಿಶಾ ಅವರ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಇದೇ ವೇಳೆ ನಿಶಾ ಅವರ 8 ಮತ್ತು 4 ವರ್ಷದ ಇಬ್ಬರು ಮಕ್ಕಳು ಮನೆಯ ಮತ್ತೊಂದು ಕೋಣೆಯಲ್ಲಿದ್ದರು. ತಾಯಿಯ ಕೊಲೆಯಾದಾಗ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಸಹ ಅವರಿಗೆ ಇರಲಿಲ್ಲ. ಬಳಿಕ ದುಷ್ಕರ್ಮಿ ಮಕ್ಕಳ ಮೇಲೂ ಹಲ್ಲೆ ಮಾಡಿದ್ದಾನೆ. ಆದರೆ, ಅದೃಷ್ಟವಶಾತ್​ ಅವರು ಬದುಕುಳಿದಿದ್ದಾರೆ.

ನಿಶಾ ಅವರ ಪತಿ ಅಜಯ್​ ಸಿಂಘಾಲ್​ ಓರ್ವ ಸರ್ಜನ್​ ಆಗಿದ್ದು, ಘಟನೆ ವೇಳೆ ಅವರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧರಿಸಿ, ಆರೋಪಿಯನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ.

ಕೇಬಲ್​ ಟಿವಿ ಟೆಕ್ನಿಶಿಯನ್ ಹೆಸರೇಳಿಕೊಂಡು ಆರೋಪಿಯು ನಿಶಾ ಅವರ ಮನೆಗೆ ನುಗ್ಗಿದ್ದಾನೆ.​ ಬಳಿಕ ಮನೆಯಲ್ಲಿ ಕಳ್ಳತನ ಮಾಡಲು ಹುಡುಕಾಡಿದ್ದಾನೆ. ನಿಶಾರನ್ನು ಕೊಲೆ ಮಾಡಿ ಅವರ ಮಕ್ಕಳ ಮೇಲೆ ಹಲ್ಲೆ ಮಾಡಿದ ಬಳಿಕವೂ ಸುಮಾರು ಒಂದು ಗಂಟೆವರೆಗೂ ಆರೋಪಿ ಮನೆಯನ್ನು ಶೋಧಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ್ರಾದ ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಘಟನೆಯಿಂದ ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಉತ್ತರ ಪ್ರದೇಶ ಸರ್ಕಾರ ಭ್ರಷ್ಟ ಅಧಿಕಾರಿಗಳ ಸಮರ್ಥನೆ ಮತ್ತು ಪ್ರತಿಪಕ್ಷ ನಾಯಕರ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸುವಲ್ಲಿ ಬಿಜಿಯಾಗಿದೆ. ಟಿವಿ ಜಾಹಿರಾತುಗಳ ಮೇಲೆ ಗಮನಹರಿಸದೇ, ಅಪರಾಧ ಚಟುವಟಿಕೆ ತಗ್ಗಿಸುವ ಕಡೆ ಗಮನಹರಿಸಿ ಎಂದು ಸಮಾಜವಾಗಿ ಪಕ್ಷದ ಮುಖ್ಯಸ್ಥ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net