More

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    | ಸುರೇಶ ಮರಕಾಲ ಸಾಯ್ಬರಕಟ್ಟೆ.

    ಕಾರು, ಬೈಕು ಅಥವಾ ಇನ್ಯಾವುದೇ ವಾಹನವನ್ನು ಬಿಡುವವರಾಗಿದ್ದರೆ, ನೀವು ಇದನ್ನು ಅನುಭವಿಸಿದವರೇ ಆಗಿರುತ್ತೀರಿ! ಯಾವುದೋ ಕೆಲಸಕ್ಕೆಂದು ಆತುರಾತುರವಾಗಿ ಹೊರಡಿರುತ್ತೀರಿ, ಹೋಗಬೇಕಾದ ಮಾರ್ಗವೂ ತುಸು ದೂರವಿದೆ, ಜೊತೆಗೆ ಬೈಕ್​ನಂತಹ ಸಣ್ಣವಾಹನಗಳು ಮುಳುಗಿಯೇ ಹೋಗುವಷ್ಟು ಆಳವಾಗಿ ಹೊಂಡ ಬಿದ್ದ ರಸ್ತೆಗಳು!, ಆದರೂ ನಿಮ್ಮ ತಾಳ್ಮೆಯನ್ನೇ ನೀವು ಮೆಚ್ಚಿಸುವಂತೆ- ಎಲ್ಲವನ್ನೂ ನಿಭಾಯಿಸಿಕೊಂಡು ವಾಹನ ಚಲಾಯಿಸುತ್ತ ಗಮ್ಯವನ್ನು ತಲುಪುವತ್ತ ಹೋಗುತ್ತಿರುತ್ತೀರಿ! ಇದ್ದಕ್ಕಿದ್ದ ಹಾಗೆ, ಯಾವುದೋ ತಿರುವಿನಲ್ಲಿ ಏಕಾಏಕಿ ನಿಮ್ಮ ವಾಹನ ಗಜಕ್ಕನೆ ನಿಲ್ಲುತ್ತದೆ! ಅದು ನಿಮ್ಮ ವಾಹನದ ಯಂತ್ರ ದೋಷದಿಂದಲ್ಲ, ಬದಲಿಗೆ ನಿಮ್ಮ ಮುಂದಿನ ಹತ್ತಾರು ವಾಹನಗಳೂ ನಿಮ್ಮ ವಾಹನದ ಹಾಗೆಯೇ “ಮುಂದೆ ಹೋಗಲಾರೆ” ಎಂದು ಮುಷ್ಕರ ಹೂಡಿ ಸಾಲಾಗಿ ರಸ್ತೆ ಮೇಲೆ ನಿಂತಿರುತ್ತವೆ! ಕುತ್ತಿಗೆ ಉದ್ದ ಮಾಡುತ್ತೀರಿ! ಏನನ್ನು ನೋಡುವುದು!? “ಥೂ! ಈಗಲೇ ಬರಬೇಕೇ?!” ಎಂಬ ಉದ್ಘಾರ ನಿಮ್ಮ ಬಾಯಿಂದಲೂ ಹೊರಡುತ್ತದೆ! ನಿಮ್ಮ ಶರವೇಗದ ವಾಹನವನ್ನು ನಿಲ್ಲಿಸಿದ್ದು ಬೇರೆ ಯಾರೂ ಅಲ್ಲ ಸ್ವಾಮೀ, ಸಂಜೆ ಕೊಟ್ಟಿಗೆಗೆ ಸಾಲಾಗಿ ಹೋಗುತ್ತಿದ್ದ ಎಮ್ಮೆ, ದನಕರುಗಳು!! ಒಂದೊಂದು ಗುಂಪಿನಲ್ಲಿ ಕನಿಷ್ಠ ಹತ್ತರಿಂದ ಇಪ್ಪತ್ತು ದನಕರುಗಳು ರಸ್ತೆಯನ್ನೇ ತಮ್ಮ ದಾರಿಯನ್ನಾಗಿಸಿಕೊಂಡು ಸಾಗುವಾಗ, ಅವುಗಳ ಮಧ್ಯೆ ದಾರಿ ಮಾಡಿಕೊಂಡು- ಅವುಗಳು ಮನಸ್ಸು ಮಾಡಿ ದಾರಿ ಬಿಟ್ಟರೆ!- ಹೋಗಲು ನಾಲ್ಕೈದು ನಿಮಿಷಗಳಾದರೂ ಬೇಕಾಗುವುದು ಖಚಿತ!! ಒಂದು ಟೀಮ್ ಹೋಯಿತೆಂದರೆ ಅದು ಮುಗಿಯುವಷ್ಟರಲ್ಲಿ ಇನ್ನೊಂದು! ಅಲ್ಲಿ ಕೇವಲ ಎಮ್ಮೆ, ದನಕರುಗಳು ಮಾತ್ರ ಇರುವುದಿಲ್ಲ. ಅವುಗಳನ್ನು ಕೊಟ್ಟಿಗೆಗೆ ಹೊಡೆದುಕೊಂಡು ಹೋಗುವ ಕನಿಷ್ಠ ಒಬ್ಬೊಬ್ಬನಾದರೂ ಇರುತ್ತಾರೆ. ಆದರೆ ಅವರೋ ತನಗೂ ಆ ದನಕರುಗಳಿಗೂ, ಅವು ಹೋಗುತ್ತಿದ್ದ ರಸ್ತೆಗೂ, ಕೊನೆಗೆ ಈ ಬಡಪಾಯಿ ವಾಹನ ಚಾಲಕರಿಗೂ ಯಾವುದೇ ಸಂಬಂಧ ಇಲ್ಲದವರಂತೆ ನೆಮ್ಮದಿಯಿಂದ ಆ ದನಕರುಗಳ ಜೊತೆಗೆ ರಸ್ತೆಯ ಮಧ್ಯದಲ್ಲಿ ತಾನೂ ಅವಧೂತನಂತೆ ಹೋಗುತ್ತಿರುತ್ತಾನೆ! ಅಲ್ಲಿಗೆ ನಿಮ್ಮ ಗಡಿಬಿಡಿಯಲ್ಲಿ ಹೊರಟ ಕೆಲಸಕ್ಕೆ ಎಳ್ಳು-ನೀರು ಬಿಟ್ಟಂತೆಯೇ!! ಈಗ ನೀವೊಂದು ದೊಡ್ಡ ಕಲ್ಪನೆ ಮಾಡಿಕೊಳ್ಳಬೇಕು! ಹತ್ತಿಪ್ಪತ್ತು ದನಕರುಗಳ ಅಥವಾ ಕುರಿ ಮೇಕೆಗಳ ಸ್ಥಾನದಲ್ಲಿ ಹದಿನೈದು ಲಕ್ಷ ಪ್ರಾಣಿಗಳನ್ನು ರಸ್ತೆಯ ಮೇಲೆ ಹೋಗುವುದನ್ನು ಕಲ್ಪಿಸಿಕೊಳ್ಳಿ, ನಮ್ಮ ಪರಿಸ್ಥಿತಿ ಏನಾಗಬೇಡ?!!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ಪೂರ್ವ ಆಫ್ರಿಕಾದಲ್ಲಿ ದನವನ್ನು ಹೋಲುವ ಒಂದು ಜಾತಿಯ ಪ್ರಾಣಿ ಇದೆ. ವೈಲ್ಡ್‌ಬೀಸ್ಟ್ ಅಥವಾ ವಿಲ್ಡ್‌ಬೀಸ್ಟ್ ಎಂದು ಅದರ ಹೆಸರು. ಒಂದೊಂದು ಗುಂಪಿನಲ್ಲಿ ಕನಿಷ್ಠ ಹತ್ತರಿಂದ ಹದಿನೈದು ಲಕ್ಷ ಪ್ರಾಣಿಗಳು ಆಹಾರ ಅರಸಿಕೊಂಡು ಸಾಲಾಗಿ ಹೋಗುತ್ತಿರುತ್ತವೆ. ವ್ಯತ್ಯಾಸವೆಂದರೆ, ಅವುಗಳು ರಸ್ತೆಯ ಮೇಲೆ ಹೋಗುವುದಿಲ್ಲ, ಏಕೆಂದರೆ ಅಲ್ಲಿ ರಸ್ತೆಗಳೇ ಇರುವುದಿಲ್ಲ! ಹೀಗಾಗಿ ಯಾವ ವಾಹನ ಚಾಲಕರಿಗೂ ತೊಂದರೆ ಆಗುವುದಿಲ್ಲ. Bovidae ಕುಟುಂಬಕ್ಕೆ ಸೇರಿದ ಇವುಗಳ ವಾಸಸ್ಥಾನ ಪ್ರಮುಖವಾಗಿ ಆಫ್ರಿಕಾದ ಸೆರಂಗೆಟಿ ನ್ಯಾಷನಲ್ ಪಾರ್ಕ್ ಹಾಗೂ ಮಸಾಯಿಮಾರಾ ನದಿಯ ಬಳಿ. ಇವುಗಳ ಅಗಣಿತ ಸಂಖ್ಯೆಯಿಂದಾಗಿಯೇ, ವೈಲ್ಡ್‌ಬೀಸ್ಟ್ ‘ಪ್ರಪಂಚದ 7ನೇ ಅದ್ಭುತ’ ಎಂದೂ ಕರೆಯಲಾಗುತ್ತದೆ!!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ವೈಲ್ಡ್ ಬೀಸ್ಟ್‌ನಲ್ಲಿ ಎರಡು ವಿಧ- ನೀಲಿ ಮತ್ತು ಕಪ್ಪು ವೈಲ್ಡ್ ಬೀಸ್ಟ್‌ಗಳು. ಇವುಗಳಲ್ಲಿ ನೀಲಿ ವೈಲ್ಡ್‌ಬೀಸ್ಟ್‌ಗಳು ಅತ್ಯಂತ ದೂರದೂರದವರೆಗೆ ವಲಸೆ ಹೋಗುವುದಕ್ಕೆ ಪ್ರಸಿದ್ಧವಾಗಿವೆ. ಟಾನ್ಜಾ಼ನಿಯಾದ ಸೆರಂಗೆಟಿ ನ್ಯಾಷನಲ್ ಪಾರ್ಕ್‌ನಿಂದ ಕೀನ್ಯಾದ ಮಸಾಯಿಮಾರಾ ನದಿಯವರೆಗೆ ಪ್ರದಕ್ಷಿಣಾಕಾರವಾಗಿ ವರ್ಷಕ್ಕೆ ಒಂದು ವೈಲ್ಡ್‌ಬೀಸ್ಟ್ ಕನಿಷ್ಠ 2,900 ಕಿ.ಮೀ. ಕ್ರಮಿಸಬಲ್ಲವು! ನ್ಯಾಷನಲ್ ಜಿಯೋಗ್ರಫಿ ಅಥವಾ ಆನಿಮಲ್ ಪ್ಲಾನೆಟ್ ನೋಡಿದರೆ ತಿಳಿಯುತ್ತದೆ, ವಿಮಾನದಿಂದ ಚಿತ್ರೀಕರಿಸಿದ ದೃಶ್ಯಗಳಲ್ಲಿ ಹುಲ್ಲು ಮೇಯುತ್ತಾ ಸಾಗುವ ವೈಲ್ಡ್‌ಬೀಸ್ಟ್ ಗುಂಪುಗಳು ಇರುವೆಗಳ ರಾಶಿಯಂತೆ ಕಾಣಿಸುತ್ತವೆ. ಒಂದು ಗುಂಪನ್ನು ಒಂದೇ ಬಾರಿಗೆ ಕೆಮರಾದಲ್ಲಿ ಸೆರೆಹಿಡಿಯಲು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರೂ, ಕೆಮರಾಮನ್‌ಗೆ ಆಗುವುದಿಲ್ಲ- ಅಷ್ಟು ದೊಡ್ಡದಾಗಿರುತ್ತದೆ ಅವುಗಳ ಗುಂಪುಗಳು! ವೈಲ್ಡ್‌ಬೀಸ್ಟ್ ಪ್ರತಿ ವರ್ಷ ಮೇ-ಜೂನ್​ನಲ್ಲಿಯೇ ತಮ್ಮ ವಾರ್ಷಿಕ ವಲಸೆ ಕೈಗೊಳ್ಳುತ್ತವೆ. ಗಂಡು-ಹೆಣ್ಣಿನಲ್ಲಿ ಶಾಶ್ವತ ಜೋಡಿ ಇರುವುದಿಲ್ಲ. ಏಕೆಂದರೆ ಅವುಗಳ ಗುಂಪು ಎಷ್ಟು ವಿಸ್ತಾರವಾಗಿರುತ್ತದೆ ಎಂದರೆ ಮೈಲು-ಮೈಲುಗಟ್ಟಲೆ ಹರಡಿಕೊಂಡ ಗುಂಪಿನಲ್ಲಿ ಒಮ್ಮೆ ಕಣ್ತಪ್ಪಿ ಹೋದ ಜೋಡಿಗಳು ಮತ್ತೆ ಒಂದಾಗುವುದು ಬಹುತೇಕ ಅಸಾಧ್ಯವೇ!!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ಬೆಳೆದ ವೈಲ್ಡ್‌ಬೀಸ್ಟ್‌ಗಳು ಸುಮಾರು ನಾಲ್ಕರಿಂದ ನಾಲ್ಕು ಮುಕ್ಕಾಲು ಅಡಿ ಎತ್ತರದವರೆಗೆ ಬೆಳೆಯುತ್ತವೆ, ಸುಮಾರು 120ರಿಂದ 270 ಕೆ.ಜಿ ತೂಗುತ್ತವೆ. ಅವುಗಳ ಸರಾಸರಿ ಆಯುಷ್ಯ 30 ವರ್ಷಗಳು. ಗುಂಪಿನಲ್ಲಿರುವ ಅಷ್ಟೂ ಹೆಣ್ಣುಗಳು ಪ್ರತಿ ವರ್ಷ ಜನವರಿಯಿಂದ ಮಾರ್ಚ್ ಮಧ್ಯಾವಧಿಯಲ್ಲೇ ಕರು ಹಾಕುತ್ತವೆ. ಸಾಮಾನ್ಯವಾಗಿ ಸಿಂಹಗಳು, ಹೈನಾ, ಚಿರತೆ ಮತ್ತು ಮೊಸಳೆಗಳು ವೈಲ್ಡ್‌ಬೀಸ್ಟ್‌ಗಳನ್ನು ಬೇಟೆಯಾಡುತ್ತವೆ. ಇವುಗಳು ಹೆಚ್ಚಾಗಿ ಗುರಿ ಇಡುವುದು ಒಂದೋ ಸುಲಭವಾಗಿ ಸಿಗಬಲ್ಲ ಚಿಕ್ಕಚಿಕ್ಕ ಕರುಗಳಿಗೆ, ಇಲ್ಲದಿದ್ದರೆ ವಯಸ್ಸಾಗಿ ದುರ್ಬಲಗೊಂಡವುಗಳಿಗೆ. ಆದರೆ ಎಲ್ಲಾ ಹೆಣ್ಣುಗಳು ವರ್ಷದ ಜನವರಿಯಿಂದ ಮಾರ್ಚ್‌ನ ಮೂರು ತಿಂಗಳ ಅವಧಿಯಲ್ಲೆ ಮರಿ ಹಾಕುವುದರಿಂದ ವೈಲ್ಡ್‌ಬೀಸ್ಟ್‌ಗಳಲ್ಲಿ ಪ್ರತಿ ವರ್ಷ ಹುಟ್ಟುವ ಬರಿಯ ಕರುಗಳ ಸಂಖ್ಯೆಯೇ ನಾಲ್ಕು ಲಕ್ಷ ಮೀರುತ್ತದೆ! ಹೀಗಾಗಿ ಇವುಗಳನ್ನು ಬೇಟೆಯಾಡುವ ಪ್ರಾಣಿಗಳು ಎಷ್ಟೇ ಬೇಟೆಯಾಡಿದರೂ ಕರುಗಳಲ್ಲಿ ಸಂಖ್ಯೆಯಲ್ಲಿ ಗಣನೀಯ ಇಳಿತ ಆಗುವುದೇ ಇಲ್ಲ!! ವೈಲ್ಟ್​ಬೀಸ್ಟ್​​ಗಳ ಗುಂಪು ಎಷ್ಟು ಒತ್ತೊತ್ತಾಗಿ ಇರುತ್ತವೆ ಎಂದರೆ, ನಾವು ಕಣ್ಣು ಮುಚ್ಚಿ ಗಾಳಿಯಲ್ಲಿ ಕಲ್ಲು ಎಸೆದರೂ, ಅದು ಯಾವುದಾದರೊಂದು ವೈಲ್ಡ್‌ಬೀಸ್ಟ್‌ಗೆ ತಾಗಿಯೇ ತಾಗಿರುತ್ತದೆ!! ಇಷ್ಟು ರಾಶಿ ರಾಶಿಯಾಗಿ ಆಹಾರ ಅರಸುತ್ತಾ ಸಾಗುವ ವೈಲ್ಡ್‌ಬೀಸ್ಟ್‌ಗಳಿಗೆ ಅವುಗಳ ಅಗಾಧ ಸಂಖ್ಯೆಯೇ ಅವುಗಳನ್ನು ಬೇಟೆಯ ಪ್ರಾಣಿಗಳಿಂದ ರಕ್ಷಣೆ ನೀಡುತ್ತದೆ.

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ವೈಲ್ಡ್‌ಬೀಸ್ಟ್‌ಗಳ ವಾಸನಾ ಗ್ರಹಣ ಶಕ್ತಿ ನಿಜಕ್ಕೂ ಅದ್ಭುತ!! ಬಾಯಾರಿದಾಗ ಸುಮಾರು ನೂರು ಕಿಲೋಮೀಟರ್ ದೂರದಲ್ಲಿರುವ ನೀರ ಪಸೆಯನ್ನು ಗಾಳಿಯ ವಾಸನೆಯಿಂದಲೇ ಇವು ಪತ್ತೆಹಚ್ಚಬಲ್ಲವು!! ಇವುಗಳ ಇನ್ನೊಂದು ವಿಶೇಷವೆಂದರೆ, ವಿಶ್ರಾಂತಿ ತೆಗೆದುಕೊಳ್ಳುವ ವೇಳೆಯಲ್ಲಿ ಅವುಗಳು ನಿರ್ವಹಿಸುವ ‘ಸೆಂಟ್ರಿ’ ವ್ಯವಸ್ಥೆ. ಪೊಲೀಸ್ ಹಾಗೂ ಇತರೆ ರಕ್ಷಣಾ ಇಲಾಖೆಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳೂ ಎಚ್ಚರವಾಗಿರಲು ಯಾರಾದರೂ ಒಬ್ಬರು ಎಚ್ಚರವಿದ್ದು ಕಾವಲು ಕಾಯುತ್ತಾ ಇರುತ್ತಾರೆ. ವೈಲ್ಡ್‌ಬೀಸ್ಟ್‌ಗಳಲ್ಲೂ ಅಷ್ಟೆ, ಲಕ್ಷಗಟ್ಟಲೆ ಒಡನಾಡಿಗಳು ಹಗಲಿನ ಪ್ರಯಾಣದ ಬಳಲಿಕೆಯಿಂದ ಸುಸ್ತಾಗಿ ಮಲಗಿರುವಾಗ, ಒಂದಷ್ಟು ವೈಲ್ಡ್‌ಬೀಸ್ಟ್‌ಗಳು ಸುತ್ತಲೂ ಪಾಳಿಯ ಪ್ರಕಾರ ಕಾವಲು ಕಾಯುತ್ತಿರುತ್ತವೆ. ಅಪ್ಪಿತಪ್ಪಿ ವೈರಿ ಕಾಣಿಸಿತೋ, ಎಲ್ಲರನ್ನೂ ಎಬ್ಬಿಸಿ ತನ್ನ ಗುಂಪನ್ನು ಕಾಪಾಡುತ್ತದೆ.

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ವೈಲ್ಡ್‌ಬೀಸ್ಟ್‌ಗಳು ದನಗಳಂತೆ ಸಾಧು ಪ್ರಾಣಿಯಾದರೂ ಪ್ರಾಣಾಪಾಯ ಎದುರಾದಾಗ, ಹಿಂಗಾಲುಗಳಿಂದ ಝಾಢಿಸಿ ಒದ್ದರೆ, ಸಿಂಹದ ಪಕ್ಕೆಲುಬೂ ಮುರಿಯಬಹುದು, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ ತನ್ನ ಕೊಂಬಿನಿಂದ ಹೈನಾದ ಹೊಟ್ಟೆಯನ್ನೂ ಸೀಳಿ ಹಾಕಬಹುದು! ಪ್ರಕೃತಿ ಎಷ್ಟು ವಿಚಿತ್ರ ನೋಡಿ, ಮನುಷ್ಯ ಹುಟ್ಟಿ ವರ್ಷವಾದರೂ ಆತ ಸಂಪೂರ್ಣ ಪರಾವಲಂಬಿ. ಆದರೆ ವೈಲ್ಡ್‌ಬೀಸ್ಟ್‌ಗಳು ಹಾಗಲ್ಲವೇ ಅಲ್ಲ. ಬಹುತೇಕ ಹೆಚ್ಚಿನ ಕಾಡು ಪ್ರಾಣಿಗಳಂತೆ- ಇವುಗಳ ಕರು ಹುಟ್ಟಿದ ಒಂದೆರಡು ನಿಮಿಷಗಳಲ್ಲೆ ಎದ್ದು ನಿಲ್ಲುತ್ತದೆ, ಮರುಕ್ಷಣದಲ್ಲೇ ಗುಂಪನ್ನು ಸೇರಿಕೊಳ್ಳಲು ಓಡುತ್ತಿರುವ ತಾಯಿಯನ್ನು ಹಿಂಬಾಲಿಸುತ್ತ, ತಾನೂ ತಪ್ಪು ತಪ್ಪು ಹೆಜ್ಜೆಗಳನ್ನು ಇಟ್ಟುಕೊಂಡು ನಡೆಯುತ್ತ, ಕೆಲವೇ ನಿಮಿಷಗಳಲ್ಲಿ ಓಡತೊಡಗುತ್ತದೆ!!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ಈ ವಿಶಾಲವಾದ ಗುಂಪಿನಲ್ಲಿ ವೈಲ್ಡ್‌ಬೀಸ್ಟ್‌ಗಳು ಮಾತ್ರವೇ ಇರುವುದಿಲ್ಲ. ಅವುಗಳೊಂದಿಗೆ ಅಗಾಧ ಸಂಖ್ಯೆಯಲ್ಲಿ ಜೀ಼ಬ್ರಾಗಳೂ ಇರುತ್ತವೆ. ಜೀ಼ಬ್ರಾಗಳೂ ವೈಲ್ಡ್‌ಬೀಸ್ಟ್‌ಗಳಂತೆಯೇ ಸಸ್ಯಾಹಾರಿಗಳಾಗಿರುವುದರಿಂದ ರಕ್ಷಣೆಗಾಗಿ ವೈಲ್ಡ್‌ಬೀಸ್ಟ್‌ಗಳೊಂದಿಗೆ ಜೊತೆಜೊತೆಯಾಗಿ ಸಾಗುತ್ತವೆ. ವೈಲ್ಡ್‌ಬೀಸ್ಟ್‌ಗಳೊಂದಿಗೆ ಸಾಗುವ ಜೀ಼ಬ್ರಾಗಳ ಸಂಖ್ಯೆಯೇ ಕನಿಷ್ಠ ಎರಡು ಲಕ್ಷ!! ಈ ಸಸ್ಯಾಹಾರಿ ಪ್ರಾಣಿಗಳನ್ನು ನಂಬಿಕೊಂಡು ಬದುಕುವ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ವೈಲ್ಡ್‌ಬೀಸ್ಟ್‌ಗಳ ತವರೂರು ಮಸಾಯಿಮಾರಾ, ಪ್ರಪಂಚದಲ್ಲೇ ಅತ್ಯಧಿಕ ವೈಲ್ಡ್‌ಬೀಸ್ಟ್‌ಗಳನ್ನು ಹೊಂದಿರುವ ಸ್ಥಳಗಳಲ್ಲಿ ಒಂದಾಗಿದೆ. ಸಿಂಹಗಳು, ಹೈನಾಗಳು, ಮೊಸಳೆಗಳು ತಿಂದು ಅಳಿದುಳಿದ ತುಣುಕುಗಳಿಗಾಗಿ ಗಾಳಿಯಲ್ಲಿ ಸದಾ ಹದ್ದುಗಳ ದಂಡೇ ವೈಲ್ಡ್‌ಬೀಸ್ಟ್‌ಗಳ ತಲೆಯ ಮೇಲೆ ಹಾರಾಡುತ್ತಿರುತ್ತದೆ!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ವೈಲ್ಡ್‌ಬೀಸ್ಟ್‌ಗಳನ್ನು ಬೇಟೆಯಾಡುವ ಮೊಸಳೆಗಳ ರೌದ್ರಮಯ ಸನ್ನಿವೇಶದ ಬಗ್ಗೆ ಹೇಳಲೇ ಬೇಕು. ಮಸಾಯಿಮಾರಾ ನದಿಯ ಬಳಿಗೆ ಬರುತ್ತಿದ್ದಂತೆ, ವೈಲ್ಡ್‌ಬೀಸ್ಟ್‌ಗಳ ನದಿದಾಟುವ ದಂಡಯಾತ್ರೆಯೇ ಆರಂಭವಾಗುತ್ತದೆ! ಸಾಗರದಂತಹ ಅವುಗಳ ದಂಡು ನದಿಯ ಬಳಿ ನಿಂತು ನದಿಯ ನೀರನ್ನು ಲೆಕ್ಕ ಹಾಕುತ್ತವೆ. ನದಿ ದಾಟಲು ಎಲ್ಲಿ ಕಡಿಮೆ ನೀರು ಇದೆಯೆಂದು ಯೋಚಿಸುತ್ತಾ, ಸಾಲಾಗಿ ನದಿ ದಂಡೆಯಲ್ಲಿ ನಿಲ್ಲುತ್ತವೆ. ಯಾವಾಗ ಗುಂಪಿನಲ್ಲಿ ಒಂದು ಪ್ರಾಣಿ ನೀರಿಗೆ ಧುಮುಕಿತೋ ಇಲ್ಲವೋ, ತಕ್ಷಣ ಆರಂಭವಾಗುತ್ತದೆ, ಕಿವಿಗಡಚಿಕ್ಕುವ ಸದ್ದು! ವೈಲ್ಡ್‌ಬೀಸ್ಟ್‌ಗಳು ದಂಡೆಯಿಂದ ಹೊಳೆಯ ನೀರಿಗೆ ಧುಮುಕುವ ಆವೇಗ ಎಷ್ಟಿರುತ್ತದೆ ಎಂದರೆ, ನದಿಯ ದಂಡೆಗೆ ದಂಡೆಯೇ ಪುಡಿ-ಪುಡಿಯಾಗುತ್ತವೆ! ವೈಲ್ಡ್‌ಬೀಸ್ಟ್‌ಗಳು ಧುಮುಕುವ ಆರ್ಭಟಕ್ಕೆ ನದಿಯಲ್ಲಿ ನೀರೇ ಕಾಣಿಸುವುದಿಲ್ಲ. ಎಲ್ಲಿ ನೋಡಿದರಲ್ಲಿ ಕಾಣುವುದು ಕೇವಲ ಅವುಗಳ ಕೋಡುಗಳು ಹಾಗೂ ಮಿರಮಿರನೆ ಮಿಂಚುವ ಅವುಗಳ ಮೈ!! ನದಿ ದಾಟುವ ಉತ್ಸಾಹದಲ್ಲಿ ಒಂದನ್ನೊಂದು ತುಳಿದು, ಹೆಚ್ಚೇಕೆ ಒಂದರ ಮೇಲೊಂದು ಹತ್ತಿಕೊಂಡು ನೀರಿಗೆ ಧುಮುಕುತ್ತವೆ. ಈ ಸಂದರ್ಭದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸಾಯುತ್ತವೆ! ಆದರೆ ಈ ವೇಳೆಗಾಗಲೆ ಹಬ್ಬದೂಟ ಸವಿಯಲು ಮೊಸಳೆಗಳು ನದಿಯಲ್ಲಿ ಎಲ್ಲೆಂದರಲ್ಲಿ ಬಂದು ಜಮಾಯಿಸಿರುತ್ತವೆ!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ಕೈಗೊಂದು ಕಾಲಿಗೊಂದರಂತೆ ಸಿಗುವ ವೈಲ್ಡ್‌ಬೀಸ್ಟ್‌ಗಳಲ್ಲಿ ಯಾವುದನ್ನು ಆಯ್ಕೆ ಮಾಡುವುದೆಂದು ಅಲ್ಲಿ ನೆರೆದಿರುವ ನೂರಾರು ಮೊಸಳೆಗಳಿಗೇ ತಲೆಬಿಸಿ ಆಗಬೇಕು, ಅಷ್ಟೊಂದು ಸಾಗರೋಪಾದಿಯಲ್ಲಿ ನದಿ ದಾಟುತ್ತವೆ! ನದಿ ದಂಡೆಯಲ್ಲಿ ವೈಲ್ಡ್‌ಬೀಸ್ಟ್‌ಗಳು ನದಿಗೆ ಜಿಗಿಯುವ ಗುಡುಗಿನಂತಹ ಶಬ್ದ, ನೀರಿನಲ್ಲಿ “ವ್ರಾಂ…ವ್ರಾಂ…” ಎಂದು ಕೂಗುತ್ತ ನದಿ ದಾಟುವ ಸದ್ದು, ಹೆಜ್ಜೆಗೊಂದರಂತೆ ಸಿಗುವ ಬಡಪಾಯಿಗಳನ್ನು ಗರಗಸದಂತಹ ಹಲ್ಲುಗಳಿಂದ ತನ್ನೆಡೆಗೆ ಎಳೆದುಕೊಂಡು ಮಾಂಸದ ಸವಿ ನೋಡುವ ಮೊಸಳೆಗಳ ಆರ್ಭಟ!! ಜೊತೆಗೆ ತಮಗೂ ಪಾಲು ಕೇಳುವ ಹಿಪೋಪೊಟಾಮಸ್‌ಗಳು!- ನಿಜಕ್ಕೂ ಅಲ್ಲೊಂದು ರೀತಿಯ ರೌದ್ರಮಯ ದೃಶ್ಯ ಸೃಷ್ಟಿಯಾಗಿ ಬಿಡುತ್ತದೆ! ಕಾಲ್ತುಳಿತ, ಮೊಸಳೆ ಬಾಯಿ, ಸೆಳೆದುಕೊಂಡು ಹೋಗುವ ನೀರಿನ ಹುಯ್ಲು- ಎಲ್ಲವನ್ನೂ ಗೆದ್ದುಬಂದ ವೈಲ್ಡ್‌ಬೀಸ್ಟ್ ನದಿಯನ್ನು ದಾಟಿ ಇನ್ನೊಂದು ದಂಡೆಯನ್ನು ಮೆಟ್ಟಿ ವಿಜಯದ ಸಂಭ್ರಮದೊಂದಿಗೆ ಮುಂದೆ ಸಾಗುತ್ತದೆ! ಸೋತವರಿಗೆ, ಸತ್ತವರಿಗೆ ಮರುಗಲು ಇಲ್ಲಿ ಯಾರಿಗೂ ಪುರುಸೊತ್ತು ಇರುವುದಿಲ್ಲ. ಇಲ್ಲಿ ಬಲಾಢ್ಯರಿಗಷ್ಟೇ ಬದುಕಲು ಅರ್ಹತೆ ಇರುವುದು. ನದಿದಾಟಿದ ವೈಲ್ಡ್‌ಬೀಸ್ಟ್‌ಗಳು ಜೀವನ ಸಂಗ್ರಾಮಕ್ಕೆ ತನ್ನನ್ನು ತಾನು ಮತ್ತೊಮ್ಮೆ ತೆರೆದುಕೊಳ್ಳುತ್ತವೆ, ಮುಂದಿನ ವರ್ಷ -ಬದುಕಿದ್ದರೆ- ಮತ್ತೊಮ್ಮೆ ಇದೇ ನದಿಯನ್ನು ದಾಟುತ್ತವೆ!!

    ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

    ತಿನ್ನುವ ಮೀನಿನ ಮಾಂಸದೊಳಗೆ ಕಾರ್ಕೋಟಕ ವಿಷ..!

    ನೆಲದ ಮೇಲೆ ಆಮೆ ವೇಗ; ನೀರಿನಲ್ಲಿ ಶರವೇಗ; ಅಚ್ಚರಿಗಳ ಆಗರ ಅನಾಕೊಂಡಾ!

    ಮೀನುಗಳಲ್ಲೊಬ್ಬ ಬಿಲ್ಲುಗಾರ ಅರ್ಜುನ: ನೀರಿನ ಬಾಣದಿಂದಲೇ ಬೇಟೆಯಾಡುವ ಚಾಣಾಕ್ಷ!

    ಈ ಸರ್ಪಗಳು ಕಚ್ಚಲ್ಲ… ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ…

    PHOTOS: ಮನುಷ್ಯರೇ ಕೂರುವಷ್ಟು ದೊಡ್ಡ ಎಲೆ!

    ಅಂದು ಅವನೆಲ್ಲಿ ತಪ್ಪಿದ..? ಇಂದು ನಾವೆಲ್ಲಿ ತಪ್ಪುತ್ತಿದ್ದೇವೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts