

ಮುಂಬೈ: ಇಪ್ಪತ್ತೈದು ವರ್ಷದ ಅವಿವಾಹಿತ ಯುವತಿಯೊಬ್ಬಳು ಮಗುವಿಗೆ ಜನ್ಮನೀಡಿದ್ದು, ಆ ನವಜಾತ ಶಿಶುವನ್ನು ತನ್ನ ಫ್ಲ್ಯಾಟ್ನ ಆರನೇ ಮಹಡಿಯಿಂದ ಕೆಳಕ್ಕೆಸೆದ ದುರಂತ ಘಟನೆ ಘಾಟ್ಕೋಪರ್ ಈಸ್ಟ್ನಲ್ಲಿ ನಡೆದಿದೆ. ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಸ್ವಸ್ಥಳಾಗಿರುವ ಆಕೆಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಾಟ್ಕೋಪರ್ ಈಸ್ಟ್ನ ಗೌರಿಶಂಕರ್ ವಾಡಿಯಲ್ಲಿರುವ ಈ ಅಪಾರ್ಟ್ಮೆಂಟ್ ಸಮೀಪ ರಕ್ತಸಿಕ್ತ ಶಿಶುವಿನ ಶವ ಬಿದ್ದುಕೊಂಡಿರುವ ಬಗ್ಗೆ ಹಾಲು ಹಾಕುವ ಹುಡುಗ ಬಿಲ್ಡಿಂಗ್ ಸೆಕ್ಯುರಿಟಿಗೆ ತಿಳಿಸಿದ್ದ. ಇದು ಆಗಸ್ಟ್ 4ರಂದು ನಡೆದ ಘಟನೆಯಾಗಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ ವೇಳೆ, ಅಪಾರ್ಟ್ಮೆಂಟ್ನಲ್ಲಿ ಗರ್ಭಿಣಿಯರು ಯಾರು ಎಂಬುದು ಪತ್ತೆಹಚ್ಚಲಾಗಿರಲಿಲ್ಲ.
ಐದು ತಿಂಗಳ ಕಾಲ ಲಾಕ್ಡೌನ್ ಇದ್ದ ಕಾರಣ ಪರಸ್ಪರ ಯಾರೂ ಸಂಪರ್ಕದಲ್ಲಿ ಇರಲಿಲ್ಲ. ಪ್ರತಿಯೊಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಈ ಯುವತಿ ಅಸ್ವಸ್ಥಳಾಗಿದ್ದುದು ಗಮನಕ್ಕೆ ಬಂತು. ವಿಚಾರಣೆಗೊಳಪಡಿಸಿದಾಗ ಮಗುವನ್ನು ಬಿಸಾಕಿದ ವಿಚಾರ ಬಹಿರಂಗವಾಯಿತು. ಕೂಡಲೇ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಶವದ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದು, ಜನಿಸುವಾಗ ಮಗು ಜೀವಂತ ಇತ್ತು. ಬಳಿಕ ತಲೆಗಾದ ಗಾಯದಿಂದಾಗಿ ಮೃತಪಟ್ಟಿದೆ ಎಂಬ ಅಂಶ ಉಲ್ಲೇಖವಿದೆ. ಈ ಪ್ರಕರಣದಲ್ಲಿ ಮಗುವಿನ ತಾಯಿಗೆ ಎರಡು ವರ್ಷ ಸೆರೆವಾಸ ಅಥವಾ ದಂಡದೊಂದಿಗೆ 2 ವರ್ಷ ಸೆರೆವಾಸ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)