ವಿಮಾನ ಪತನಕ್ಕೆ ಪೈಲಟ್​ ದೋಷವೇ ಕಾರಣ: ಅಮೆರಿಕ ಮಾಧ್ಯಮ ವರದಿ ತಿರಸ್ಕರಿಸಿದ ತನಿಖಾ ಬ್ಯೂರೋ! Air India crash

Air India crash
Published on

Air India crash : ಅಹಮದಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಸಂಭವಿಸಿದ ಏರ್​ ಇಂಡಿಯಾ ವಿಮಾನ ಅಪಘಾತಕ್ಕೆ ಪೈಲಟ್ ದೋಷವೇ ಕಾರಣ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ವರದಿಗಳ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋದ ಮಹಾನಿರ್ದೇಶಕ ಜಿವಿಜಿ ಯುಗಂಧರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಧಾರರಹಿತ ಮಾಹಿತಿಯ ಆಧಾರದ ಮೇಲೆ ಅಪಘಾತದ ಬಗ್ಗೆ ಆತುರದ ತೀರ್ಮಾನಗಳಿಗೆ ಬರದಂತೆ ವಿದೇಶಿ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.

ಅಪ್ರಸ್ತುತ ಕಥೆಗಳನ್ನು ಹರಡುವುದನ್ನು ನಿಲ್ಲಿಸಿ. ಈ ಪ್ರಕರಣದ ಸಂಪೂರ್ಣ ತನಿಖೆ ಇನ್ನೂ ನಡೆಯುತ್ತಿದೆ. ಅಪಘಾತಕ್ಕೆ ಮೂಲ ಕಾರಣಗಳು ಮತ್ತು ಶಿಫಾರಸುಗಳೊಂದಿಗೆ ನಾವು ಅಂತಿಮ ವರದಿಯನ್ನು ಪಡೆಯುತ್ತೇವೆ. ಈ ಮಧ್ಯೆ, ಯಾರೂ ಅಪೂರ್ಣ ಮಾಹಿತಿಯೊಂದಿಗೆ ಅಕಾಲಿಕ ಮೌಲ್ಯಮಾಪನ ಅಥವಾ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಸುಳ್ಳು ಡೇಟಾದೊಂದಿಗೆ ಭಾರತೀಯ ವಾಯುಯಾನ ಕ್ಷೇತ್ರದ ಸುರಕ್ಷತೆಯ ಬಗ್ಗೆ ಪ್ರಯಾಣಿಕರ ಕಾಳಜಿಯನ್ನು ಅನಗತ್ಯವಾಗಿ ಹೆಚ್ಚಿಸಬೇಡಿ" ಎಂದು ಯುಗಂಧರ್ ಸಲಹೆ ನೀಡಿದ್ದಾರೆ.

ಪ್ರಯಾಣಿಕರ ಕುಟುಂಬ ಸದಸ್ಯರು, ವಿಮಾನದ ಸಿಬ್ಬಂದಿ ಮತ್ತು ನೆಲದ ಮೇಲೆ ಸಾವಿಗೀಡಾದ ಇತರ ವ್ಯಕ್ತಿಗಳು ಎದುರಿಸಿದ ನಷ್ಟದ ಸೂಕ್ಷ್ಮತೆಯನ್ನು ಗೌರವಿಸುವುದು ಅತ್ಯಗತ್ಯ. ಅಂತಾರಾಷ್ಟ್ರೀಯ ಮಾಧ್ಯಮಗಳ ಕೆಲವು ವಿಭಾಗಗಳು ಆಯ್ದ ಮತ್ತು ಪರಿಶೀಲಿಸದ ವರದಿಗಳ ಮೂಲಕ ಪದೇಪದೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ವಿಶೇಷವಾಗಿ ತನಿಖೆ ನಡೆಯುತ್ತಿರುವಾಗ ಇಂತಹ ಕ್ರಮಗಳು ಬೇಜವಾಬ್ದಾರಿಯಿಂದ ಕೂಡಿರುತ್ತವೆ. ತನಿಖಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಅಕಾಲಿಕ ನಿರೂಪಣೆಗಳನ್ನು ಹರಡುವುದನ್ನು ತಡೆಯಲು ನಾವು ಸಾರ್ವಜನಿಕರು ಮತ್ತು ಮಾಧ್ಯಮ ಇಬ್ಬರನ್ನೂ ಒತ್ತಾಯಿಸುತ್ತೇವೆ ಎಂದು ಯುಗಂಧರ್ ಹೇಳಿದ್ದಾರೆ.

ಏರ್ ಇಂಡಿಯಾ ವಿಮಾನ ಅಪಘಾತದ ಕುರಿತಾದ ಅಮೆರಿಕದ ಕ್ರ್ಯಾಶ್ ವರದಿಯು ವಿವಾದಾತ್ಮಕವಾಗಿದೆ. ಕಾಕ್‌ಪಿಟ್ ರೆಕಾರ್ಡಿಂಗ್‌ಗಳ ಆಧಾರದ ಮೇಲೆ ಕ್ಯಾಪ್ಟನ್ ಸುಮೀತ್ ಸಭರ್ವಾಲ್ (56) ಇಂಜಿನ್‌ಗಳಿಗೆ ಇಂಧನ ಹರಿವನ್ನು ಕಡಿಮೆ ಮಾಡಿದ್ದಾರೆ ಎಂಬ ಅಮೆರಿಕದ ವರದಿಯನ್ನು ಭಾರತೀಯ ಪೈಲಟ್‌ಗಳ ಒಕ್ಕೂಟ ತಿರಸ್ಕರಿಸಿದೆ. ಅಮೆರಿಕದ ಅಧಿಕಾರಿಗಳ ಮೌಲ್ಯಮಾಪನವನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್, ವರದಿಯನ್ನು ಮೊದಲೇ ಬಿಡುಗಡೆ ಮಾಡಿದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವನ್ನು 56 ವರ್ಷದ ಸುಮಿತ್ ಸಭರ್ವಾಲ್ ನಿರ್ದೇಶಿಸಿದ್ದರು. ಅವರಿಗೆ ಒಟ್ಟು 15,638 ಗಂಟೆಗಳ ಹಾರಾಟದ ಅನುಭವವಿದೆ.

ಕಪ್ಪು ಪೆಟ್ಟಿಗೆಯ ದಾಖಲೆಯ ಪ್ರಕಾರ ಕ್ಯಾಪ್ಟನ್ ಸುಮೀತ್ ಸಭರ್ವಾಲ್ (56) ಅವರು ಟೇಕ್ ಆಫ್ ಆದ ನಂತರ ಅಹಮದಾಬಾದ್‌ನಲ್ಲಿರುವ ವೈದ್ಯರ ಹಾಸ್ಟೆಲ್‌ಗೆ ವಿಮಾನದ ಅಪ್ಪಳಿಸುವ ಕೆಲವೇ ಸೆಕೆಂಡುಗಳ ಮುಂಚೆ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಆಫ್ ಮಾಡಿದ್ದಾರೆ ಎಂದು ವಾಲ್​ ಸ್ಟ್ರೀಟ್​ ಜರ್ನಲ್​ ಸುದ್ದಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನ ಅಪಘಾತ ತನಿಖಾ ಬ್ಯೂರೋದ ಮಹಾನಿರ್ದೇಶಕ ಜಿವಿಜಿ ಯುಗಂಧರ್ ಈ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net