

Govt hospital : ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಮತ್ತು ಅವಾಂತರಗಳ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಈಗಾಗಲೇ ಓದಿದ್ದೇವೆ ಮತ್ತು ನೋಡಿದ್ದೇವೆ. ಆಸ್ಪತ್ರೆ ಒಳಗೆ ಪ್ರಾಣಿಗಳ ಓಡಾಟ, ಆಪರೇಷನ್ ಮಾಡುವಾಗಲೇ ವಿದ್ಯುತ್ ಕೈಕೊಡುವುದು ಮತ್ತು ವೈದ್ಯಕೀಯ ಯಂತ್ರಗಳು ಕಾರ್ಯಾಚರಣೆ ನಡೆಸುವುದು ಮತ್ತು ವೈದ್ಯರ ಎಡವಟ್ಟು ಸೇರಿದಂತೆ ಅನೇಕ ಪ್ರಕರಣಗಳು ಈ ಹಿಂದೆ ವರದಿಯಾಗಿವೆ. ಕೆಲವೊಮ್ಮೆ ವೈದ್ಯರ ನಿರ್ಲಕ್ಷದಿಂದ ಸಾವು ಸಂಭವಿಸಿ ಪ್ರತಿಭಟನೆಗಳು ನಡೆದ ಉದಾಹರಣೆಗಳು ಕೂಡ ಇವೆ. ಇದೀಗ ಸರ್ಕಾರಿ ಆಸ್ಪತ್ರೆಯ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ.
ಗರ್ಭದ ಒಳಗೆ ಮಗು ಸತ್ತಿದೆ ಮತ್ತು ಕೂಡಲೇ ಗರ್ಭಪಾತ ಮಾಡಿಸಿಕೊಳ್ಳಲು ಮಧ್ಯಪ್ರದೇಶದ ಸಾತ್ನಾ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಗರ್ಭಿಣಿಗೆ ಹೇಳಿದ್ದರು. ಆದರೆ, ಎರಡನೇ ಅಭಿಪ್ರಾಯಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಹೊಟ್ಟೆಯಲ್ಲಿ ಮಗು ಆರೋಗ್ಯವಾಗಿ ಇರುವುದು ಗೊತ್ತಾಗಿದೆ. ಅಲ್ಲದೆ, ಗರ್ಭಿಣಿ 3.5 ಕೆಜಿ ತೂಕದ ಆರೋಗ್ಯಕರ ಮಗುವಿಗೆ ಜನ್ಮ ಸಹ ನೀಡಿದ್ದಾರೆ. ಈ ಒಂದು ಘಟನೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ತೆರೆದಿಟ್ಟಿದೆ.
ಮಗುವಿಗೆ ಜನ್ಮ ನೀಡಿದ ಮಹಿಳೆಯನ್ನು ದುರ್ಗಾ ದ್ವಿವೇದಿ (24) ಎಂದು ಗುರುತಿಸಲಾಗಿದೆ. ಈಕೆ ಮಧ್ಯಪ್ರದೇಶದ ರಾಂಪುರ ಬಘೇಲನ್ ಪಟ್ಟಣದ ಬಳಿಯಿರುವ ಚಕೇರಾ ಗ್ರಾಮದ ನಿವಾಸಿ. ಹೊಟ್ಟೆ ನೋವು ಶುರುವಾದ ಹಿನ್ನೆಲೆಯಲ್ಲಿ ಜುಲೈ 15 ಮತ್ತು 16 ರಾತ್ರಿ 2 ಗಂಟೆ ಸುಮಾರಿಗೆ ಅಮರ್ಪಟನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗರ್ಭಿಣಿಯ ಸ್ಥಿತಿ ಗಂಭೀರವಾದ್ದರಿಂದ ಅವರ ಜತೆಯಲ್ಲಿ ಬಂದಿದ್ದ ಆಶಾ ಕಾರ್ಯಕರ್ತೆಯೊಬ್ಬರಿಗೆ ಸಾತ್ನಾ ಜಿಲ್ಲೆಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ಬೆಳಗ್ಗೆ 4 ಗಂಟೆಗೆ ತಿಳಿಸಲಾಯಿತು.
ಬಳಿಕ ಸುಮಾರು 7.30ರ ಹೊತ್ತಿಗೆ ಜಿಲ್ಲಾಸ್ಪತ್ರೆಗೆ ಗರ್ಭಿಣಿಯನ್ನು ಕರೆತರಲಾಯಿತು. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯರು ಮಾಮೂಲಿಯಂತೆ ರಕ್ತ ಪರೀಕ್ಷೆಗೆ ಸೂಚನೆ ನೀಡಿದರು. ಬೆಳಗ್ಗೆ 9 ಗಂಟೆಯ ಹೊತ್ತಿಗೆ, ಹಿರಿಯ ವೈದ್ಯರು ಡಾಪ್ಲರ್ ಪರೀಕ್ಷೆಯನ್ನು ನಡೆಸಿದರು. ಆದರೆ, ಭ್ರೂಣದ ಹೃದಯ ಬಡಿತವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಂತರದ ಸೋನೋಗ್ರಫಿಯಲ್ಲಿ ಭ್ರೂಣದ ಚಲನೆ ಕಂಡುಬರಲಿಲ್ಲ. ಇದರಿಂದಾಗಿ ಮಗು ಸಾವಿಗೀಡಾಗಿದೆ ಎಂದು ವೈದ್ಯಕೀಯ ತಂಡವು ತೀರ್ಮಾನಿಸಿತು. ಅಲ್ಲದೆ, ಗರ್ಭಪಾತ ಮಾಡಿಸಲು ಸೂಚನೆ ನೀಡಿತು.
ಈ ಬಗ್ಗೆ ಮಾತನಾಡಿರುವ ದುರ್ಗಾ ಅವರ ಪತಿ ರಾಹುಲ್ ದ್ವಿವೇದಿ, ಜಿಲ್ಲಾಸ್ಪತ್ರೆಯ ವೈದ್ಯರು ಹೇಳಿದ್ದು, ನನ್ನ ಪತ್ನಿಗೆ ಮನವರಿಕೆಯಾಗಲಿಲ್ಲ. ಹೃದಯ ಬಡಿತವಿಲ್ಲ ಎಂದು ವೈದ್ಯರು ಹೇಳಿದರು ಕೂಡ ಮುಂದಿನ ಹೆಜ್ಜೆ ಇಡುವ ಮೊದಲು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದೆವು. ಬಳಿಕ ಖಾಸಗಿಯಾಗಿ ಮತ್ತೊಂದು ಸ್ಕ್ಯಾನ್ ಮಾಡಲು ನಾವು ನಿರ್ಧರಿಸಿದೆವು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆ ವೈದ್ಯರ ಹೇಳಿಕೆಯನ್ನು ದುರ್ಗಾ ದಂಪತಿ ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಎರಡನೇ ಅಭಿಪ್ರಾಯಕ್ಕಾಗಿ ಭರ್ಹುತ್‌ನಗರದಲ್ಲಿರುವ ರೋಗನಿರ್ಣಯ ಕೇಂದ್ರಕ್ಕೆ ದಂಪತಿ ಹೋದರು. ಅಲ್ಲಿನ ಹೊಸ ಸೋನೋಗ್ರಫಿ ಯಂತ್ರ ಮಗು ಇನ್ನೂ ಜೀವಂತವಾಗಿದೆ ಮತ್ತು ಆರೋಗ್ಯವಾಗಿದೆ ಎಂಬುದನ್ನು ದೃಢಪಡಿಸಿತು. ಇದಾದ ತಕ್ಷಣ ದುರ್ಗಾ ಅವರನ್ನು ಖಾಸಗಿ ನರ್ಸಿಂಗ್ ಹೋಂಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರಿಗೆ ಸಿಸೇರಿಯನ್ ಮಾಡಲಾಯಿತು. ದುರ್ಗಾ ಅವರು 3.5 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಪ್ರಕರಣದ ಬೆನ್ನಲ್ಲೇ ಜಿಲ್ಲಾ ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆರಂಭಿಕ ಪರೀಕ್ಷೆಗಳಲ್ಲಿ ಭ್ರೂಣದ ಹೃದಯ ಬಡಿತ ಪತ್ತೆಯಾಗಿಲ್ಲ ಎಂದು ಮಾತೃತ್ವ ವಿಭಾಗದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಡಾಪ್ಲರ್ ಮತ್ತು ಸೋನೋಗ್ರಫಿ ಎರಡರಲ್ಲೂ ಹೃದಯ ಬಡಿತ ಕಂಡುಬಂದಿಲ್ಲ, ಅದಕ್ಕಾಗಿಯೇ ಭ್ರೂಣ ಸತ್ತಿದೆ ಎಂದು ಘೋಷಿಸಲಾಯಿತು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಸಿಎಂಹೆಚ್‌ಒ ಡಾ. ಎಲ್. ಕೆ. ತಿವಾರಿ ಮಾತನಾಡಿದ್ದು, ಬುಧವಾರ ಬೆಳಗ್ಗೆ ಈ ವಿಷಯ ಬೆಳಕಿಗೆ ಬಂದಿದೆ ಎಂದರು. ಈ ಬಗ್ಗೆ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ಸಿವಿಲ್ ಸರ್ಜನ್‌ಗೆ ಪತ್ರ ಕಳುಹಿಸಲಾಗಿದೆ. ವಿವರವಾದ ತನಿಖೆ ನಡೆಸಲಾಗುವುದು ಮತ್ತು ಯಾವುದೇ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ಇದುವರೆಗಿನ ಆಂತರಿಕ ತನಿಖೆಯಲ್ಲಿ ಮೂವರು ವೈದ್ಯರ ಹೆಸರುಗಳು ಹೊರಬಿದ್ದಿವೆ. ಇದರಲ್ಲಿ ಸೋನೋಗ್ರಫಿ ನಡೆಸಿದ ರೇಡಿಯಾಲಜಿಯ ಹಿರಿಯ ವೈದ್ಯ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ವೈದ್ಯರು ಸೇರಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್)