ಬೇಡ ಅಂದ್ರು ಬಿಡಲಿಲ್ಲ -ಕರೊನಾ ಕಾಟ ತಪ್ಪಲಿಲ್ಲ..

xiong 11 APR 20
Published on

ಬೀಜಿಂಗ್​: ಒಂದು ತಗೊಂಡ್ರೆ ಇನ್ನೆರಡು ಉಚಿತ ಎನ್ನುವುದು ವ್ಯಾಪಾರದ ಆಕರ್ಷಕ ಘೋಷಣೆ. ಕರೊನಾ COVID19 ವೈರಸ್​ ಸೋಂಕು ಹರಡುತ್ತಿರುವ ಮತ್ತು ಲಾಕ್​ಡೌನ್ ನ ಈ ಅವಧಿಯಲ್ಲೇನು ವ್ಯಾಪಾರ! ಎಂದು ಹುಬ್ಬೇರಿಸಬೇಡಿ. ಇದು ವ್ಯಾಪಾರಕ್ಕೆ ಸಂಬಂಧಿಸಿದ ಮಾತಲ್ಲ - ಕ್ವಾರಂಟೈನ್​ಗೆ ಸಂಬಂಧಿಸಿದ್ದು! ವಿಷಾದನೀಯ ವಿಚಾರವಾದರೂ ಇದು ವಾಸ್ತವ!

ಹೌದು.. ಪೂರ್ವ ಚೀನಾದ ಶಾನ್​ಡಾಂಗ್​ ಪ್ರಾಂತ್ಯದದ ಜಿನಿಂಗ್ ಪಟ್ಟಣದಲ್ಲಿ ನಡೆದ ಘಟನೆ ಇದು. ಒಂದಕ್ಕೆ ಎರಡು ಕ್ವಾರಂಟೈನ್ ಪಡೆದ ವ್ಯಕ್ತಿಯ ಹೆಸರು ಕ್ಸಿಯಾಂಗ್​. ಬಹುತೇಕ ಎರಡು ತಿಂಗಳು ಕ್ವಾರಂಟೈನ್ ಅವಧಿ ಅನುಭವಿಸಿದ ಮಹಾನುಭಾವ. ಈ ಘಟನೆಯನ್ನು ಸ್ವತಃ ಕ್ಸಿಯಾಂಗ್ ವಿವರಿಸುತ್ತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಚೀನಾದಲ್ಲಿ ಮನೆಮಾತಾಗಿದೆ!

ಒಂದು ರೀತಿಯಲ್ಲಿ ಇದು ತಪ್ಪೊಪ್ಪಿಗೆಯ ಹೇಳಿಕೆಯಂತೆ ಕಂಡರೂ, ಅನೇಕರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಕ್ಸಿಯಾಂಗ್ ಅವರ ನಿರೂಪಣೆಯೂ ಅದೇ ರೀತಿ ಇದೆ ಕೂಡ. ಅವರ ಮಾತುಗಳಲ್ಲೇ ನಿರೂಪಿಸುವುದಾದರೆ,

ಜಿನ್ನಿಂಗ್ ಪಟ್ಟಣ ಫೆ.8ರಂದು ಲಾಕ್​ಡೌನ್​ಗೆ ಒಳಗಾದ ವೇಳೆ ನಾನು ಮೊದಲ ಬಾರಿ ಕ್ವಾರಂಟೈನ್​ಗೆ ಒಳಗಾಗಬೇಕಾಗಿ ಬಂತು. ಈ ಲಾಕ್​ಡೌನ್​ಗೆ ಎರಡು ದಿನ ಹಿಂದಷ್ಟೇ ನಾನು ಫಿಲಿಪ್ಪೀನ್ಸ್​ನಿಂದ ವಾಪಸಾಗಿದ್ದೆ. 14 ದಿನಗಳ ಕ್ವಾರಂಟೈನ್​ಗೆ ಒಳಗಾಗಲು ಅಧಿಕಾರಿಗಳು ಸೂಚಿಸಿದ್ದರು. ಅದು ನನಗೆ ಬಹಳ ತ್ರಾಸದಾಯಕ ವಿಚಾರ ಎನಿಸಿತ್ತು. ಆದರೆ 50 ದಿನ ಒಂದೇ ಕೊಠಡಿಯೊಳಗೆ ಕುಳಿತಿರುವುದಕ್ಕಿಂತ ಆರಂಭದಲ್ಲೇ 14 ದಿನ ಕುಳಿತಿದ್ದರೆ ಎಷ್ಟೋ ಬೆಟರ್ ಅಂತ ಈಗ ಅನ್ನಿಸ್ತಾ ಇದೆ. ಈ ರೀತಿ ಕುಳಿತಿರಬೇಕಾದ ಪ್ರಸಂಗ ಯಾಕೆ ಎದುರಾಯ್ತು ಗೊತ್ತ? ವಿವರಿಸ್ತೇನೆ ಓದಿ..

ಮೊದಲ 14 ದಿನಗಳ ಅವಧಿಯ ಕ್ವಾರಂಟೈನ್ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತ ಮನೆಯಿಂದ ಹೊರಬಿದ್ದೆ. ಒಂದು ವಾಕ್ ಹೋಗಿ ಬರೋಣ ಅಂತ ಬೀದಿಗಿಳಿದೆ. ಲಾಕ್​ಡೌನ್ ಅವಧಿ ಮುಗಿದಿರಲಿಲ್ಲ. ಹೊರಗೆ ದಕ್ಷಿಣ ಕೊರಿಯಾದಿಂದ ಆಗತಾನೇ ಬಂದ ಪಕ್ಕದ ಮನೆಯಾತ ಸಿಕ್ಕಿದ. ಆತ ನೇರವಾಗಿ ನನ್ನ ಬಳಿ ಬಂದು ಮಾತನಾಡಿದ. ಆತನ ಜತೆಗೆ ಒಬ್ಬರು ಆರೋಗ್ಯ ಸಿಬ್ಬಂದಿಯೂ ಇದ್ದರು. ಹಾಗೆ, ಆತ ಮತ್ತೆ ನನ್ನನ್ನು ಕ್ವಾರಂಟೈನ್​ಗೆ ದೂಡಿದ. ಮತ್ತೆ ಹದಿನಾಲ್ಕು ದಿನಗಳ ಏಕಾಂತವಾಸ. ಈ ಹದಿನಾಲ್ಕು ದಿನಗಳಲ್ಲಿ ಕೋಣೆಯೊಳಗಿನ ನೆಲದ ಮೇಲೆ ಅಂಗಾತ ಮಲಗಿಕೊಂಡು ಏನೂ ಮಾಡದೇ ಹಾಗೆಯೇ ಕಳೆದುಬಿಟ್ಟೆ. ಅಕ್ಷರಶಃ ಬೆಚ್ಚಿಬಿದ್ದೆ ನಾನು. ಇಷ್ಟಾಗಿ ನಾನು ಮನೆಯಿಂದ ಹೊರಗೆ ಇಳಿಯುವ ಧೈರ್ಯ ಅಥವಾ ಸಾಹಸಕ್ಕೆ ಮುಂದಾಗಲಿಲ್ಲ.

ಹಾಗಾದರೆ ಎರಡನೇ ಅವಧಿಯ ಕ್ವಾರಂಟೈನ್ ಮುಗಿಯಿತು. ನಿರಂತರ ಮೂರನೇ ಅವಧಿಯ ಕ್ವಾರಂಟೈನ್​ಗೆ ನಾನು ಒಳಗಾಗಬೇಕಾಗಿ ಬಂದ ಬಗೆಯ ಬಗ್ಗೆ ಕುತೂಹಲವೇ? ಇರಿ.. ವಿವರಿಸ್ತೇನೆ ಓದಿ...

ಆ ಎರಡನೇ ಅವಧಿಯ 14 ದಿನಗಳ ಏಕಾಂತವಾಸ ಮುಗಿಯುತ್ತಿರುವಂತೆ ನನ್ನ ತಮ್ಮ ಸಿಂಗಾಪುರದಿಂದ ಮನೆಗೆ ಬಂದ. ಅಯ್ಯೋ ನನ್ನ ವಿಧಿಯೇ ಎಂದು ಹಣೆಬರೆಹಕ್ಕೆ ಬೈಯುತ್ತಾ ಮತ್ತೆ 14 ದಿನಗಳ ಕ್ವಾರಂಟೈನ್​ಗೆ ಒಳಗಾದೆ. ಹೀಗೆ ಮೂರು ಅವಧಿಯ ಕ್ವಾರಂಟೈನ್​ ಅನ್ನು ಏನೂ ಕೆಲಸ ಮಾಡದೆ ನೆಲದ ಮೇಲೆ ಹೊರಳಾಡುತ್ತ, ಗೋಳಾಡುತ್ತ ಕಳೆದೆ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net