VIDEO | ಬಿಹಾರದ ವೈಶಾಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ: ಈ ತಿಂಗಳಲ್ಲಿ ನಡೆದ 3ನೇ ಘಟನೆಯಿದು!

bridge
Published on

ಬಿಹಾರ: ಬಿಹಾರದ ವೈಶಾಲಿಯಲ್ಲಿ ಗಂಗಾ ನದಿಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯ ಒಂದು ಭಾಗವು ಬುಧವಾರ ಬಲವಾದ ಗಾಳಿಯಿಂದಾಗಿ ಕೊಚ್ಚಿಹೋಗಿದೆ ಎಂದು ಸುದ್ದಿ ಸಂಸ್ಥೆ ಎಎನ್​​ಐ ವರದಿ ಮಾಡಿದೆ. ಈ ಸೇತುವೆಯು ರಾಘೋಪುರವನ್ನು ವೈಶಾಲಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುತ್ತದೆ. ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಅಂದಹಾಗೆ ಸೇತುವೆಯ ಮುರಿದ ಭಾಗವು ನದಿಯಲ್ಲಿ ಕುಸಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

100 ಮೀಟರ್ ನಿರ್ಮಾಣ ಹಂತದ ಸೇತುವೆಯೊಂದು ಕಿಶನ್‌ಗಂಜ್‌ನ ಗೋರಿಚಕ್‌ನಲ್ಲಿ ಕುಸಿದುಬಿದ್ದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಇದಲ್ಲದೆ, ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥದ ರಸ್ತೆ ಸೇತುವೆಯು ಈ ತಿಂಗಳ ಆರಂಭದಲ್ಲಿ ಕುಸಿದಿದೆ. 1,700 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯು ಗಂಗಾನದಿಯ ಮೇಲೆ ಭಾಗಲ್ಪುರ ಜಿಲ್ಲೆಯನ್ನು ಖಗರಿಯಾದ ಆಗುವನಿ ಘಾಟ್‌ಗೆ ಸಂಪರ್ಕಿಸುತ್ತದೆ. ಕಳೆದ ವರ್ಷ ಏಪ್ರಿಲ್ 30ರಂದು ಸೇತುವೆಯ ಒಂದು ಭಾಗ ಕುಸಿದಿತ್ತು.

“ಸೇತುವೆ ಕುಸಿದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ಘಟನೆ ಏಕೆ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಕೇಳಿದ್ದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಕೇಳಿಕೊಂಡಿದ್ದೇನೆ'' ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ತಿಂಗಳ ಆರಂಭದಲ್ಲಿ ಸೇತುವೆ ಕುಸಿದಾಗ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net